ಅಕ್ಟೋಬರ್ 12 ರಂದು ವಿಜಯ ದಶಮಿಯಂದು ಮೈಸೂರಿನಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಈ ಬಾರಿ ಕೊರಟಗೆರೆ ತಾಲ್ಲೂಕಿನಲ್ಲಿರುವ ಔಷಧ ಸಸ್ಯಗಳ ಕಾಶಿ ಎಂದೇ ಪ್ರಸಿದ್ಧವಾದ ಸಿದ್ಧರಬೆಟ್ಟದ ಸ್ತಬ್ಧಚಿತ್ರ ಚಿತ್ರ ಪ್ರದರ್ಶನಗೊಳ್ಳಲಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ ಪ್ರಭು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯ ಪ್ರಮುಖವಾದ ಐದು ಕ್ಷೇತ್ರಗಳ ಮಾಹಿತಿ ಪಡೆದು, ಕಲಾವಿದರಿಂದ ವಿನ್ಯಾಸ ಸಿದ್ಧ ಪಡಿಸಿ ಅಂತಿಮವಾಗಿ ಸಿದ್ಧರ ಬೆಟ್ಟ ಅಯ್ಕೆ ಮಾಡಿದ್ದಾರೆ. ಜೊತೆಗೆ ಏಷ್ಯಾದ ಏಕಶಿಲ ಬೆಟ್ಡ ಮಧುಗಿರಿ ಮತ್ತು ಚನ್ನರಾಯನದುರ್ಗವನ್ನು ಸೇರಿಸಿದಂತೆ ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ಧರಬೆಟ್ಟ ಮತ್ತು ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು ಎನ್ನುವ ಐತಿಹಾಸಿಕ ಹಿನ್ನಲೆಯ ವಿಷಯಾಧಾರಿತ ಸ್ತಬ್ಧಚಿತ್ರ ನಿರ್ಮಿಸಿ, ಈ ಬಾರಿಯ ದಸರಾ ಮಹೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಸ್ತಬ್ಧಚಿತ್ರದ ವಿಶೇಷ :
11 ಅಡಿ ಅಗಲ, 12 ಅಡಿ ಎತ್ತರ ಮತ್ತು 32 ಅಡಿ ಉದ್ದವಿರುವ ಸ್ತಬ್ಧಚಿತ್ರದ ಮುಂದಿನ ಅರ್ಧಭಾಗ ಸಿದ್ಧರಬೆಟ್ಟ, ಹಿಂದಿನ ಅರ್ಧಭಾಗದಲ್ಲಿ ಒಂದು ಪಾರ್ಶ್ವದಲ್ಲಿ ಮಧುಗಿರಿ ಬೆಟ್ಟ, ಮತ್ತೊಂದು ಪಾರ್ಶ್ವದಲ್ಲಿ ಚನ್ನರಾಯನದುರ್ಗ ಪ್ರತಿಕೃತಿ ಬರಲಿದೆ. ಮುಂಭಾಗದಲ್ಲಿ ಸಿದ್ದರಬೆಟ್ಟ, ಶ್ರೀಸಿದ್ಧೇಶ್ವರ ಸ್ವಾಮಿ ಮತ್ತು ಗುಹೆ, ಮೆಟ್ಟಿಲುಗಳು,ಮಹಾದ್ವಾರ ಮೂಡಿ ಬರಲಿದೆ. ಯೋಗಿಗಳ ಶಿಷ್ಯರಾದ ರಾಜ ಕುರಂಗರಾಯ ಮತ್ತು ಕೋಟೆಯ ಜೊತೆಗೆ ಬೆಟ್ಟದಲ್ಲಿ ಇರುವ ಐತಿಹಾಸಿಕ ಕುರುಹುಗಳನ್ನು ಸ್ತಬ್ಧಚಿತ್ರಲ್ಲಿ ತರಲಾಗುತ್ತಿದೆ. ಮಧುಗರಿ ಮತ್ತು ಚನ್ನರಾಯನದುರ್ಗದ ಅರಸರ ಚಿತ್ರಗಳು, ಇತಿಹಾಸದ ಸಾಕ್ಷಿಗಳಾದ ಶಾಸನ, ವೀರಗಲ್ಲು, ದೇವಾಲಯಗಳ ಪ್ರತಿಕೃತಿ ಮೂಡಿ ಬರಲಿದೆ.
ಕಲಾವಿದರು : 2014 ರಿಂದಲೂ ತುಮಕೂರು ಜಿಲ್ಲೆಯನ್ನು ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಆರು ಬಾರಿ ಪ್ರತಿನಿಧಿಸಿ ಐದು ಬಾರಿ ಬಹುಮಾನ ತಂದು ಕೊಟ್ಟ ತಿಪಟೂರಿನ ಕಲಾಕೃತಿ ತಂಡದ ಕಲಾವಿದ ತಿಪಟೂರು ಕೃಷ್ಣ ಮತ್ತು ಅವರ ತಂಡ ಈ ಬಾರಿಯೂ ನಿರ್ಮಾಣದ ಹೊಣೆಗಾರಿಕೆ ಹೊತ್ತಿದ್ದಾರೆ. ತಿಪಟೂರಿನ ಅರಳುಗುಪ್ಪೆಯ ಶ್ರೀ ಚನ್ನಕೇಶವ ದೇವಾಲಯ (2014), ಎಡೆಯೂರು ಶ್ರೀಸಿದ್ದಲಿಂಗೇಶ್ವರ ದೇವಾಲಯ(2017), ಸಿದ್ದಗಂಗೆಯ ಶ್ರೀಶಿವಕುಮಾರ ಸ್ವಾಮಿಗಳು(2018), ಅಕ್ಷರ ದಾಸೋಹ ಸಿದ್ದಗಂಗ ಮಠ(2019), ನಿಟ್ಟೂರು ಹೆಚ್ ಎ ಎಲ್ ಘಟಕ (2022), ಮೂಡಲಪಾಯ ಯಕ್ಷಗಾನ (2023) ಹೀಗೆ ವಿಶೇಷವಾದ ಮತ್ತು ಆಕರ್ಷಕವಾದ ಸ್ತಬ್ಧಚಿತ್ರ ನಿರ್ಮಿಸಿ ಬಹುಮಾನಗಳ ಜೊತೆಗೆ ಜನ ಮೆಚ್ಚಿಗೆ ಪಡೆದ ಈ ತಂಡದಲ್ಲಿ 15 ಕ್ಕೂ ಹೆಚ್ಚು ನುರಿತ ಕಲಾವಿದರಿದ್ದಾರೆ. ಈಗಾಗಲೇ ಸೆಪ್ಟೆಂಬರ್ 26 ರಿಂದ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಜಂಬೂ ಸವಾರಿಯ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದೆ. :