ಕರ್ನಾಟಕದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಿಕ್ತು ಮುಖ್ಯಮಂತ್ರಿಗಳಿಂದ ಗ್ರೀನ್ ಸಿಗ್ನಲ್

ಕರ್ನಾಟಕದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಿಕ್ತು ಮುಖ್ಯಮಂತ್ರಿಗಳಿಂದ ಗ್ರೀನ್ ಸಿಗ್ನಲ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಸಭೆಯನ್ನು ನಡೆಸಲಾಗಿದೆ.

ಈ ಸಭೆಯಲ್ಲಿ ಈಗಾಗಲೇ ಗುರುತಿಸಲಾಗಿರುವ 11೦ ಎಕರೆ ಕೆಐಎಡಿಬಿ ಭೂಮಿ ಹಸ್ತಾಂತರಿಸಿ ಆದೇಶ ಹೊರಡಿಸಲು ಸೂಚಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮೊದಲ ಹಂತದ ಯೋಜನೆಯನ್ನು ಕೂಡಲೇ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. 2015-16 ರಲ್ಲಿ ಆಯವ್ಯಯ ಘೋಷಣೆ ಮಾಡಲಾಗಿತ್ತು.  ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕ  ಮಾಡಲು ಟೆಂಡರ್ ಕರೆಯುವಂತೆ ಸೂಚಿಸಲಾಗಿದೆ.

ಭೂಮಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರ ಮಾಡಿದ ನಂತರ ಪಿಪಿಪಿ ಮಾದರಿಯಲ್ಲಿ ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಕರೆಯಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಇಂದಿನ ಚಿತ್ರರಂಗಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನೊಳಗೊಂಡ ಅತ್ಯಾಧುನಿಕ ಮಾದರಿಯ ಚಿತ್ರನಗರಿ ನಿರ್ಮಿಸಲು ಸೂಚಿಸಿದರು. ಚಿತ್ರನಗರಿಯಲ್ಲಿ ಥಿಯೇಟರ್, ಸ್ಟುಡಿಯೋ, ಮಲ್ಟಿಪ್ಲೆಕ್ಸ್, ಥೀಮ್ ಪಾರ್ಕ್, ಹೋಟೆಲ್ಗಳನ್ನೂ ನಿರ್ಮಿಸಲು ಸೂಚಿಸಿದರು. ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕವಾದ ನಂತರ ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಚಿತ್ರನಗರಿಯ ರೂಪುರೇಷೆಗಳನ್ನು ಅಂತಿಮಗೊಳಿಸಲು ಸೂಚಿಸಿದರು.

ಇದರಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಚಿತ್ರ ಪ್ರವಾಸೋದ್ಯಮಕ್ಕೆ (Film Tourism) ಒತ್ತು ನೀಡಲು ಸೂಚನೆ ಮಾಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *