ಸಾರ್.. ₹10,000 ಬೆಲೆ ಬಾಳುವ ಗಣಪತಿ ಮೂರ್ತಿ ಕದ್ದಿದ್ದಾರೆ ನ್ಯಾಯ ಕೊಡ್ಸಿ: ಪೊಲೀಸರಿಗೆ ವ್ಯಾಪಾರಿ ಮನವಿ

ಹಿರಿಯೂರು: ಗಣೇಶ ಚತುರ್ಥಿ ಪ್ರಯುಕ್ತ ಮಾರಾಟಕ್ಕೆ ತಂದಿದ್ದ ಗಣೇಶ ಮೂರ್ತಿಗಳಲ್ಲಿ ಒಂದು ಮೂರ್ತಿಯನ್ನು ಕಳವು ಮಾಡಿದ್ದಾರೆ. ಅದನ್ನು ಹುಡುಕಿಕೊಡಿ ಎಂದು ವ್ಯಾಪಾರಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.

ಹಾಗಾದರೆ ಮುಂದಾಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಗರದ ರವಿಕುಮಾರ್ ಕುಂಬಾರು ಎನ್ನುವ ವ್ಯಾಪಾರಿಯು ಸುಮಾರು ವರ್ಷಗಳಿಂದ ಮಣ್ಣಿನ ಗಣಪತಿಗಳನ್ನು ಹಬ್ಬದ ಪ್ರಯುಕ್ತ ಮಾರಾಟ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲೂ ವ್ಯಾಪಾರ ಮುಂದುವರೆಸಿದ್ದರು. ಹಿರಿಯೂರು ನಗರದ ಪ್ರಧಾನ ರಸ್ತೆಯ ನೆಹರು ಸರ್ಕಲ್ ಬಿಇಓ ಕಚೇರಿ ಹತ್ತಿರ ಗಣಪತಿಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಶಿರಾ ತಾಲ್ಲೂಕಿನ ದೊಡ್ಡ ಆಲದಮರ ಹಾಗೂ ಹುಳಿಯಾರಿನಿಂದ ಎರಡು ಲೋಡ್ ಗಣೇಶ ಮೂರ್ತಿಗಳನ್ನು ತೋರಿಸಲಾಗಿತ್ತು. ಹಾಗೆಯೇ ದಿನಾಂಕ ಸೆಪ್ಟೆಂಬರ್ 7, 2024ರಂದು ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿದ ನಂತರ 6 ದೊಡ್ಡ ಗಣಪತಿಗಳು ಉಳಿದಿದ್ದವು.

ಇನ್ನು ಅಂದು ನಾನು ಮನೆಗೆ ಬೇಗ ಹೋಗಿರುವುದನ್ನು ಗಮನಿಸಿ ದಿನಾಂಕ ರಾತ್ರಿ 1 ಗಂಟೆಯಿಂದ 2 ಗಂಟೆಯ ಸಮಯದೊಳಗೆ ಸುಮಾರು 10,000 ರೂಪಾಯಿ ಬೆಲೆ ಬಾಳುವ 5 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಕಳವು ಮಾಡಲಾಗಿದೆ ಎಂದು ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.

ವೀರೇಂದ್ರ ಎಂಬ ವ್ಯಕ್ತಿ ಗಣಪತಿ ಪಕ್ಕದಲ್ಲಿದ್ದ ಕಟ್ಟೆ ಮೇಲೆ ಮಲಗಿದ್ದನು. ಆತನ ಸಹಾಯದಿಂದ ಆರೇಳು ಜನ ಗಣಪತಿಯನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

“ನಾನು ಬಂಗಾರ ಅಡವಿಟ್ಟು ಹಣ ತಂದು ಗಣಪತಿ ಮಾರಾಟ ಮಾಡುತ್ತಿದ್ದೇನೆ. ಇದರಿಂದ ನನಗೆ ಸುಮಾರು 10,000 ರೂಪಾಯಿ ನಷ್ಟ ಆಗಿರುತ್ತದೆ. ಆದ್ದರಿಂದ ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ನನಗೆ ನ್ಯಾಯ ದೊರಕಿಸುವಂತೆ ತಮ್ಮಲ್ಲಿ ಮನವಿ ಮಾಡುತ್ತೇನೆ,” ಎಂದು ದೂರುದಾರ ಹಿರಿಯೂರು ನಗರ ಠಾಣೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: ಸೆಪ್ಟೆಂಬರ್ 07, 2024ರಂದು ದೇಶಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಇತ್ತ ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗದಲ್ಲೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದ ಬಿ ಡಿ ರಸ್ತೆಯಲ್ಲಿನ ಜೈನಧಾಮದಲ್ಲಿ ಬೃಹತ್ ಪೆಂಡಾಲ್ ಹಾಕಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

21 ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಗಣಪತಿಗೆ ಪ್ರಥಮವಾಗಿ ಒಂದು ಗ್ರಾಂ ಬಂಗಾರದ ಆಭರಣಗಳನ್ನು ತಯಾರು ಮಾಡಿ, ಗಣೇಶನಿಗೆ ತೋಡಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಗಣಪತಿ ಪೂರ್ವ ದಿಕ್ಕಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಉತ್ತರ ದಿಕ್ಕಿಗೆ ಮಂಟಪವನ್ನು ನಿರ್ಮಾಣ ಮಾಡಿ ಉತ್ತರ ದಿಕ್ಕಿಗೆ ಈ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ನೂರಾರು ಭಕ್ತರು ಶ್ರೀ ಗಣೇಶನ ಪೂಜೆಯಲ್ಲಿ ಭಾಗಿಯಾಗಿ ದರ್ಶನ ಪಡೆದರು. ಪ್ರತಿದಿನ ಬೆಳಗ್ಗೆ ಗಣಪತಿಗೆ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸ್ಥಳೀಯರಿಗಲ್ಲದೇ ಹೊರ ಜಿಲ್ಲೆಯ, ಹೊರ ರಾಜ್ಯದವರಿಗೂ ತಮ್ಮ ಕಲೆಯನ್ನು ಪ್ರದರ್ಶನ ಮಾಡಲು ಅವಕಾಶವನ್ನು ಈ ಬಾರಿ ಕಲ್ಪಿಸಲಾಗಿದೆ. ಸಂಗೀತ ಭರತನಾಟ್ಯ ಯಕ್ಷಗಾನ ಸೂತ್ರದ ಗೊಂಬೆ ಮಾತನಾಡುವ ಗೊಂಬೆ ಎಂತಹ ಕಾರ್ಯಕ್ರಮಗಳು 22ರ ವರೆಗೆ ನಡೆಯಲಿದೆ. ಸೆಪ್ಟೆಂಬರ್ 27ರಂದು ಬೃಹತ್ ಮೆರವಣಿಗೆಯ ಮೂಲಕ ಗಣೇಶನ ಶೋಭ ಯಾತ್ರೆ ನಡೆಯಲಿದ್ದು, ಅಂದು ರಾತ್ರಿ ವಿಸರ್ಜನೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *