ಎಚ್‌ಡಿ ಕುಮಾರಸ್ವಾಮಿ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ SIT

ಎಚ್ಡಿ ಕುಮಾರಸ್ವಾಮಿ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ SIT

ಬೆಂಗಳೂರು: ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಮಧ್ಯ ಪ್ರವೇಶ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಕರ್ನಾಟಕ ಲೋಕಾಯುಕ್ತದ ಎಸ್‌ಐಟಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಆಗಸ್ಟ್ 3, 2015 ರಂದು ಮಾಜಿ ಮುಖ್ಯಮಂತ್ರಿಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಅಧಿಕಾರಿಗಳು ಸೋಮವಾರ ಅರ್ಜಿ ಸಲ್ಲಿಸಿದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿತು. ಪ್ರಕರಣದ ಎರಡನೇ ಆರೋಪಿಯಾಗಿರುವ ಕುಮಾರಸ್ವಾಮಿ, ಪ್ರಕರಣದ ಸಂಬಂಧಿಸಿದ ದಾಖಲೆಗಳನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಎಸ್‌ಐಟಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಅಲ್ಲದೆ, ತನಿಖೆಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಆರೋಪಿ ರಾಜ್ಯಪಾಲರು ಮತ್ತು ಎಸ್‌ಐಟಿ ನಡುವಿನ ಸಂವಹನವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಇದು ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿ ಮತ್ತು ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತದೆ ಎಂದು ಎಸ್‌ಐಟಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *