RCB ವಿಜಯೋತ್ಸವ ಸಂದರ್ಭದ ಕಾಲ್ತುಳಿತ ಪ್ರಕರಣ ವಿಧಾನಸಭೆಯಲ್ಲಿ ಭಾರಿ ಸದ್ದು – ಸಿಎಂ ಸಿದ್ದರಾಮಯ್ಯ

RCB ವಿಜಯೋತ್ಸವ ಸಂದರ್ಭದ ಕಾಲ್ತುಳಿತ ಪ್ರಕರಣ ವಿಧಾನಸಭೆಯಲ್ಲಿ ಭಾರಿ ಸದ್ದು - ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತ ಸಂಬಂಧ ಕರ್ನಾಟಕ ವಿಧಾನಸಭೆಯಲ್ಲಿ ಶುಕ್ರವಾರ ಬಿಸಿ ಬಿಸಿ ಚರ್ಚೆ ನಡೆಯಿತು. ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲ್ತುಳಿತ ಘಟನೆ ಬಗ್ಗೆ ವಿಷದ ವ್ಯಕ್ತಪಡಿಸಿದರು. ಅಲ್ಲದೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಂಭವಿಸಿದ್ದ ಸಾವುಗಳು, ಬಿಜೆಪಿ ಆಡಳಿತ ಇರುವ ಬೇರೆ ರಾಜ್ಯಗಳಲ್ಲಿ ಸಂಭವಿಸಿದ್ದ ದುರಂತಗಳನ್ನು ಉಲ್ಲೇಖಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಸಮರ್ಥಿಸಿಕೊಂಡರು.

ಘಟನೆ ಸಂಭವಿಸಿದಾಗ ಮುಖ್ಯಮಂತ್ರಿಗಳು ಹೋಟೆಲ್ನಲ್ಲಿ ದೋಸೆ ತಿನ್ನಲು ಹೋಗಿದ್ದರು ಎಂಬ ಪ್ರತಿಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ, ಮೊಮ್ಮಗ ಹಿಂದಿನ ದಿನ ವಿದೇಶದಿಂದ ಬಂದಿದ್ದ. ಆತನೂ ವಿಧಾನಸೌಧದ ಗ್ರ್ಯಾಂಡ್ ಸ್ಪೆಟ್ಸ್ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ. ಆತನ ಕೋರಿಕೆ ಮೇರೆಗೆ ಹೋಟೆಲ್ಗೆ ಹೋಗಿದ್ದೆ. ಆ ಸಂದರ್ಭದಲ್ಲಿ ನನಗೆ ಕಾಲ್ತುಳಿತದಿಂದ ಜನ ಮೃತಪಟ್ಟಿರುವುದು ಗೊತ್ತಿರಲಿಲ್ಲ. ಕಾಲ್ತುಳಿತ ಸಂಭವಿಸಿದೆ ಎಂಬ ಸುದ್ದಿ ನೋಡಿದ ಕೂಡಲೇ ಅಂದಿನ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ಒಂದು ಸಾವು ಸಂಭವಿಸಿದೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಿ 11 ಮಂದಿ ಮೃತಪಟ್ಟಿದ್ದರು ಎಂದು ಹೇಳಿದರು.

ಕಾಲ್ತುಳಿತ ಘಟನೆಗೆ ಸದನದಲ್ಲಿ ಸಿದ್ದರಾಮಯ್ಯ ವಿಷಾದ

ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಮಾಯಕರ ಶವಗಳನ್ನು ನೋಡಿ ದುಃಖ ಆಗಿತ್ತು. ಇಂಥ ಘಟನೆ ನಡೆಯಬಾರದಿತ್ತು ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಬಿಜೆಪಿ ಆಡಳಿತ ಇರುವ ಬೇರೆ ರಾಜ್ಯಗಳಲ್ಲಿ ಸಂಭವಿಸಿದ ದುರಂತಗಳ ಬಗ್ಗೆ ಮಾತನಾಡಿದರು.

ಗುಜರಾತ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದಾಗ ಎನ್ಡಿಎ ಅಥವಾ ಬಿಜೆಪಿಯ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ? ಅಲ್ಲಿ ಜನ ಸತ್ತಿಲ್ಲವೇ? ಹಾಗಾದರೆ, ಈ ಕಾಲ್ತುಳಿತದ ಸಂದರ್ಭದಲ್ಲಿ ಬಿಜೆಪಿ ನಮ್ಮ ರಾಜೀನಾಮೆಯನ್ನು ಏಕೆ ಕೇಳುತ್ತಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ನಾಯಕರು ಮುಖ್ಯಮಂತ್ರಿಗಳ ಮೇಲೆ ವಾಗ್ದಾಳಿ ನಡೆಸಿದರು. ಈ ವೇಳೆ ಗದ್ದಲ ಉಂಟಾಯಿತು.

ಚಾಮರಾಜನಗರ ಆಕ್ಸಿಜನ್ ಕೊರತೆ ದುರಂತ ಪ್ರಸ್ತಾಪಿಸಿದ ಸಿಎಂ

ಇಷ್ಟಕ್ಕೆ ಸುಮ್ಮನಾಗದ ಸಿದ್ದರಾಮಯ್ಯ ಬಿಜೆಪಿ ಆಡಳಿತಾವಧಿಯ ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಸ್ತಾಪಿಸಿದರು. ಆಗ 36 ಜನ ಮೃತಪಟ್ಟಿದ್ದರು. ಆಗ ಯಾರ ರಾಜೀನಾಮೆ ಕೇಳಿದ್ದಿರಿ? ಆಗ ಯಾರಿಗೆ ಅಬೇಟರ್ ಎಂದಿದ್ದಿರಿ ಎಂದು ಹರಿಹಾಯ್ದರು.

ಸಿಎಂ ಸಿದ್ದರಾಮಯ್ಯ ಮಾತಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಮನೆಗೆ ಹೋಗಿದ್ದಿರಿ, 11 ಜನರ ಮನೆಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು, ನಾವೆಲ್ಲ ಹೋಗಿದ್ದೇವೆ ಎಂದು ಸಿಎಂ ಬೆಂಬಲಕ್ಕೆ ನಿಂತರು. ಪ್ರತಿಯೊಬ್ಬರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ, ಜೆಡಿಎಸ್ ಸಭಾತ್ಯಾಗ

ಇಷ್ಟು ದೊಡ್ಡ ಘಟನೆಯಾದರೂ ಯಾರೂ ಕ್ಷಮಾಪಣೆ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಆರ್ ಅಶೋಕ್, 11 ಅಮಾಯಕರ ಸಾವಿಗೆ ರಾಜ್ಯ ಸರ್ಕಾರ ಕಾರಣ ಎಂದು ದೂರಿದರು. ಸಿಎಂ ಕ್ಷಮೆಯಾಚನೆಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *