ಮಂಡ್ಯ: ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಗಲಾಟೆ ಉಂಟಾಗಿದೆ. ಮೆರವಣಿಗೆ ಮಸೀದಿ ಎದುರು ಹಾದುಹೋಗುತ್ತಿದ್ದ ವೇಳೆ ಅಚಾನಕ್ ಕಲ್ಲು ತೂರಾಟ ನಡೆದಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರೂ, ಪ್ರತಿಭಟನಾಕಾರರು ಜೈಶ್ರೀರಾಮ್ ಘೋಷಣೆ ಕೂಗುತ್ತ ಕುಳಿತು ಪ್ರತಿಭಟನೆ ನಡೆಸಿದರು. ಕೆಲ ಕಿಡಿಗೇಡಿಗಳು ಮತ್ತೆ ಕಲ್ಲು ತೂರಿದ ಪರಿಣಾಮ ಪರಿಸ್ಥಿತಿ ಗಂಭೀರಗೊಂಡಿತು. ಹೀಗಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.
ಲಾಠಿಚಾರ್ಜ್ ವೇಳೆ ಓಡಿದಾಗ ಹಲವರು ಬಿದ್ದು ಗಾಯಗೊಂಡಿದ್ದು, ಕೆಲ ಮಹಿಳೆಯರೂ ಗಾಯಗೊಂಡಿದ್ದಾರೆ. ರಸ್ತೆ ಬದಿ ನಿಲ್ಲಿಸಿದ್ದ ಅನೇಕ ಬೈಕುಗಳು ಜಖಂಗೊಂಡಿವೆ. ಒಟ್ಟು 8 ಜನರು, ಅದರಲ್ಲಿ 4 ಮಂದಿ ಹೋಂಗಾರ್ಡ್ಸ್ ಸಹ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡುತ್ತಾ – “ಘಟನೆ ಸಂಬಂಧ ಈಗಾಗಲೇ 21 ಮಂದಿಯನ್ನು ಬಂಧಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಿಎಂ ಸಿದ್ದರಾಮಯ್ಯ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ”ಎಂದು ಹೇಳಿದ್ದಾರೆ. ಈ ಘಟನೆ ಮಂಡ್ಯದಲ್ಲಿ ಕೋಮು ತೀವ್ರತೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಭದ್ರತೆ ಕಠಿಣಗೊಳಿಸಲಾಗಿದೆ.
For More Updates Join our WhatsApp Group :