ದಾವಣಗೆರೆ: ಮೂವರು ಮಕ್ಕಳು ಸೇರಿ ಒಟ್ಟು 5 ಜನರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸ್ನೇಹಾ (8), ಮದನ್ ಬೈರವ್ (2), ಚಂದ್ರಿಕಾ (3), ಸುಮಾ(30) ಮತ್ತು ರುದ್ರಮ್ಮ (65) ಬೀದಿ ನಾಯಿ ದಾಳಿಯಿಂದ ಗಾಯಗೊಂಡವರು. ಬುಧವಾರ ಸಂಜೆ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ ಮೂವರು ಮಕ್ಕಳ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಬಳಿಕ ಮನೆ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಕಚ್ಚಿ ಗಾಯಗೊಳಿಸಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿ.ಹೊಸಹಳ್ಳಿ ಗ್ರಾಮಕ್ಕೆ ಬೇರೆ ಊರಿನಿಂದ ಬಂದಿದ್ದ ಕಪ್ಪು ಬಣ್ಣದ ನಾಯಿ ಅಟ್ಯಾಕ್ ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗಾಯಾಳುಗಳಿಗೆ ಬಸವಾಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ದಾವಣಗೆರೆ ಜಿಲ್ಲಾ ಸಿಜೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಓರ್ವ ಬಾಲಕಿಗೆ ಹೆಚ್ಚು ಗಾಯಗಳಾಗಿವೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಆ ಬೀದಿ ನಾಯಿಯನ್ನು ಸೆರೆಹಿಡಿಯಲು ಗ್ರಾಮಸ್ಥರು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ