ಬೆಂಗಳೂರು: ನೆರೆಯ ರಾಜ್ಯ ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದಲ್ಲೂ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆ ಅವಾಂತರ ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ವಲಯ ಆಯುಕ್ತರೊಂದಿಗೆ ಸೋಮವಾರ ಸಭೆ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಗರದಲ್ಲಿ ಭಾರೀ ಮಳೆಯಾಗದಿದ್ದರೂ, ಪ್ರವಾಹಕ್ಕೆ ಒಳಗಾಗುವ ತಗ್ಗು ಪ್ರದೇಶಗಳಲ್ಲಿ 80 ಅರ್ಥ್ ಮೂವರ್ಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಚರಂಡಿಯಲ್ಲಿನ ಹೂಳು, ತ್ಯಾಜ್ಯವನ್ನು ತೆರವುಗೊಳಿಸಲು ಮತ್ತು ಮಳೆಯ ಸಮಯದಲ್ಲಿ ಚರಂಡಿ ಮುಚ್ಚಿಹೋಗದಂತೆ ನೋಡಿಕೊಳ್ಳಲು ಎಂಜಿನಿಯರ್ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನೆರೆ ರಾಜ್ಯಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆಗಳನ್ನು ನೀಡಿದೆ. ಆದರೂ, ಪಾಲಿಕೆ ಮುನ್ನೆಚ್ಚರಿಕೆ ವಹಿಸಿದೆ. ಎಲ್ಲಾ ವಲಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸನ್ನದ್ಧರಾಗಿರಬೇಕೆಂದು ಸೂಚನೆ ನೀಡಲಾಗಿದೆ, ಜೆಸಿಬಿಗಳ ಮೂಲಕ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳನ್ನು ತೆಗೆಯುವಂತೆ, ಪ್ರಮುಖ ರಸ್ತೆಗಳ ಸೈಡ್ ಡ್ರೈನ್ಗಳಿಗೆ ಸರಾಗವಾಗಿ ನೀರು ಹೋಗುವಂತೆ ಸ್ವಚ್ಛಗೊಳಿಸುವಂತೆ ಜೊತೆಗೆ ಮರ ತೆರವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಳೆ ಹಿನ್ನೆಲೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೋಲ್ಡ್ ಮಿಕ್ಸ್ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಮಳೆ ನಿಂತ ಕೂಡಲೆ ಹಾಟ್ ಮಿಕ್ಸ್ ಪ್ಲಾಂಟ್ನಿಂದ ಹೆಚ್ಚು ಹೆಚ್ಚು ಡಾಂಬರನ್ನು ಪಡೆದು ಶೀಘ್ರ ಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದರು.