ಸಾಮಾನ್ಯವಾಗಿ ಸಿನಿಮಾ ರಿಲೀಸ್ ಬಂತು ಎಂದರೆ ಚಿತ್ರ ತಂಡದವರು ಸಂದರ್ಶನ ನೀಡಿತ್ತಾರೆ. ಸಿನಿಮಾ ಪೋಸ್ಟರ್ಗಳನ್ನು ರಸ್ತೆಗಳ ಬದಿಯಲ್ಲಿರೋ ಗೋಡೆಗೆ ಅಂಟಿಸುವ ಕೆಲಸ ಮಾಡುತ್ತಾರೆ. ಸಿನಿಮಾ ಜನರ ತಲುಪಲು ಏನೆಲ್ಲ ಬೇಕೋ ಅದೆಲ್ಲ ಪ್ರಯತ್ನವನ್ನು ಮಾಡುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡ ಪದ್ಧತಿ. ಹಾಗಂತ ಇದು ತಪ್ಪು ಕೂಡ ಅಲ್ಲ. ‘ಸು ಫ್ರಮ್ ಸೋ’ ನಿರ್ಮಾಪಕ ರಾಜ್ ಬಿ ಶೆಟ್ಟಿ ಒಂದು ಹೊಸ ಪ್ರಯತ್ನ ಮಾಡಿ ಗೆದ್ದಿದ್ದಾರೆ. ‘ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರೇ ಬರುತ್ತಿಲ್ಲ’ ಎಂಬ ಮಾತಿನಿಂದ ‘ಚಿತ್ರಕ್ಕೆ ಟಿಕೇಟ್ಗಳೇ ಸಿಗುತ್ತಿಲ್ಲ, ಎಲ್ಲಾ ಹೌಸ್ ಫುಲ್ ಆಗಿದೆ’ ಎಂಬ ಮಾತು ಬರುವಂತೆ ಮಾಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾ ಗೆಲುವಿನ ಬಳಿಕ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಶೋ ತ್ರಿಬಲ್ ಆಯ್ತು..
ಕನ್ನಡ ಸಿನಿಮಾಗಳಿಗೆ ಶೋ ಸಿಗಲ್ಲ, ಪರ ಭಾಷೆಯವರು ಬಂದು ನಮ್ಮ ಶೋ ಕಸಿದುಕೊಳ್ಳುತ್ತಾರೆ ಎಂಬಿತ್ಯಾದಿ ಆರೋಪಗಳಿವೆ. ಆದರೆ, ‘ಸು ಫ್ರಮ್ ಸೋ’ ವಿಚಾರದಲ್ಲಿ ಅದು ಉಲ್ಟಾ ಆಗಿದೆ. ‘ದೊಡ್ಡ ಸಿನಿಮಾಗಳ ಮಧ್ಯೆ ಬರ್ತಿದೀವಿ ಎಂದಾಗ ಅನೇಕರು ಬೇಡ ಎಂದು ಸಲಹೆ ನೀಡಿದರು. ಆದರೆ, ನಾನು ಒಂದು ಸಂದೇಶ ಕೊಡಬೇಕಿತ್ತು. ಹೀಗಾಗಿ, ರಿಸ್ಕ್ ತೆಗೆದುಕೊಂಡು ಜುಲೈ 25ಕ್ಕೆ ಬಂದೆ. ಸಂದರ್ಶನ ಕೊಡಲು ಟಿವಿ ಮುಂದೆ ಕೂರಲ್ಲ, ಪೋಸ್ಟರ್ ಅಂಟಿಸಲ್ಲ ಎಂದು ಮೊದಲೇ ನಿರ್ಧರಿಸಿದ್ದೆ. ಬೇರೆ ರೀತಿ ಪ್ರಮೋಟ್ ಮಾಡಬೇಕು ಎಂದು ಅಂದುಕೊಂಡಿದ್ದೆ. ಇದು ವರ್ಕ್ ಆಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇರಲಿಲ್ಲ. ಏಕೆಂದರೆ ಹಿಂದೆ ಯಾರೂ ಮಾಡಿರಲಿಲ್ಲ. ಮೊದಲ ದಿನ ಬೆಂಗಳೂರಿನಲ್ಲಿ 78 ಶೋ ಕೊಡಲಾಗಿತ್ತು. ಎಡನೇ ದಿನಕ್ಕೆ ಅದು 210 ಶೋಗಳಾದವು’ ಎಂದು ಮಾಹಿತಿ ನೀಡಿದ್ದಾರೆ ರಾಜ್. ಈ ಮೂಲಕ ಒಂದೇ ದಿನಕ್ಕೆ ಶೋ ಮೂರು ಪಟ್ಟಾಗಿದೆ.
ಪ್ರಚಾರಕ್ಕೆ ಹೊಸ ತಂತ್ರ
ರಾಜ್ ಬಿ ಶೆಟ್ಟಿ ಅವರು ಈ ಬಾರಿ ಮಾಡಿದ ಹೊಸ ತಂತ್ರ ಎಂದರೆ ಸಿನಿಮಾ ರಿಲೀಸ್ಗೆ ನಾಲ್ಕೈದು ದಿನ ಇರುವಾಗಲೇ ಜನರಿಗೆ ಸಿನಿಮಾ ತೋರಿಸಿದ್ದಾರೆ. ಸಿನಿಮಾ ನೋಡುವಾಗ ಜನರ ಭಾವನೆಯನ್ನು ಕ್ಯಾಪ್ಚರ್ ಮಾಡಿ ಅದನ್ನು ಜನರ ಮುಂದಿಡುವ ಕೆಲಸ ಮಾಡಿದ್ದಾರೆ. ಈ ತಂತ್ರ ಕೆಲಸ ಮಾಡಿದೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬಾಯ್ಮಾತಿನ ಪ್ರಚಾರ ನೀಡಿದ್ದಾರೆ.