ಬೆಂಗಳೂರು:ಕರ್ನಾಟಕದ ವಿವಿಧ ನಿಗಮ ಮಂಡಳಿ ನೇಮಕದಲ್ಲಿ ಗೊಂದಲ ಮುಂದುವರಿದಿದ್ದು, ಬಾಕಿ ಉಳಿದಿದ್ದ ಐದು ನಿಗಮ ಮಂಡಳಿಗಳಿಗೂ ಅಧ್ಯಕ್ಷರ ನೇಮಕ ಮಾಡಲಾಗಿದೆ. ಇನ್ನು ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅದಲು ಬದಲು ಮಾಡಿ ಸರ್ಕಾರ ಆದೇಶಿಸಿದೆ. ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್ ರಾಜ್ ಮೌರ್ಯಗೆ ಇದೀಗ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿಎಂಟಿಸಿ ಅಧ್ಯಕ್ಷರಾಗಿ ವಿ ಎಸ್ ಆರಾಧ್ಯ ಅವರನ್ನ ನೇಮಕ ಮಾಡಲಾಗಿದೆ. ಇದರಿಂದ ಈಗಾಗಲೇ ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ನಿಕೇತ್ ರಾಜ್ ಮೌರ್ಯಗೆ ಒಂದು ರೀತಿ ಮುಜುಗರವೆನಿಸಿದೆ.
ಹೈಕಮಾಂಡ್ ಕಳುಹಿಸಿದ್ದ ಪಟ್ಟಿಯಲ್ಲಿ ನಿಕೇತ್ ರಾಜ್ ಮೌರ್ಯ ಹೆಸರೇ ಇರಲಿಲ್ಲ. ಬಳಿಕ ಸಿಎಂ ಸಿದ್ದರಾಮ್ಯನವರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಬಿಎಂಟಿಸಿ ಅಧ್ಯಕ್ಷರನ್ನಾಗಿ ನಿಕೇತ್ ರಾಜ್ ಮೌರ್ಯ ಅವರನ್ನು ನೇಮಕ ಮಾಡಿದ್ದರು. ಇದರಿಂದ ಫುಲ್ ಖುಷ್ ಆಗಿದ್ದ ನಿಕೇತ್ ರಾಜ್ ಮೌರ್ಯ ಅಧಿಕಾರ ಸ್ವೀಕಾ ಸಹ ಮಾಡಿ ಮುಗಿಸಿದ್ದರು. ಆದರೆ, ಇದೀಗ ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ. ಇನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ವಿಎಸ್ ಆರಾಧ್ಯ ಎಂಬುವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ.
ಸರ್ಕಾರದ ಬದಲಾವಣೆಗೆ ನಿಕೇತ್ ರಾಜ್ ಮೌರ್ಯ ಹಾಗೂ ಅವರ ಬೆಂಬಲಿಗರಿಗೆ ನಿರಾಸೆಯಾಗಿದ್ದು, ಒಂದು ರೀತಿ ಕೊಟ್ಟು ಕಿತ್ತುಕೊಂಡು ಅವಮಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿವೆ.
ಬಾಕಿ 5 ನಿಗಮಕ್ಕೆ ಅಧ್ಯಕ್ಷರ ನೇಮಕ
ಇನ್ನು ಬಾಕಿ ಉಳಿದ 5 ನಿಗಮ ಮಂಡಳಿಗಳಿಗೂ ಅಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
- ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ – ಸೈಯದ್ ಮೆಹಮೂದ್ ಚಿಸ್ಟಿ.
- ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ – ಶರಣಪ್ಪ ಸಲಾದ್ ಪುರ್ .
- ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷ- ಆಂಜನಪ್ಪ
- ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡ ಅಧ್ಯಕ್ಷಳಿ – ನೀಲಕಂಠರಾವ್ ಎಸ್ ಮೂಲಗೆ
- ಜವಾಹರ ಬಾಲಭವನ ಸೊಸೈಟಿ ಉಪಾಧ್ಯಕ್ಷ – ಅನಿಲ್ ಕುಮಾರ್ ಜಮಾದಾರ್
ಕಾಗವಾಡ ಶಾಸಕ ರಾಜು ಕಾಗೆ ಅಧ್ಯಕ್ಷರಾಗಿದ್ದ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಅರುಣ್ ಕುಮಾರ್ ಪಾಟೀಲ್ ಹೆಸರನ್ನು ಎಐಸಿಸಿ ಪಟ್ಟಿ ಮಾಡಿತ್ತು. ಇದು ಮುದ್ರಣ ದೋಷ ಎಂಬ ಸ್ಪಷ್ಟನೆಯೊಂದಿಗೆ ಅರುಣ್ ಪಾಟೀಲ್‌ರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿ ರಾಜು ಕಾಗೆ ಹುದ್ದೆ ಅಬಾಧಿತವಾಗಿತ್ತು. ಆದರೆ, ಎಐಸಿಸಿ ಅನುಮೋದಿತ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ನೀಲಕಂಠ ಮುಳ್ಗೆ ಅವರನ್ನು ಶಿಫಾರಸು ಮಾಡಲಾಗಿತ್ತು. ಬಳಿಕ ಸಿಎಂ ಸಿದ್ದರಮಯ್ಯ ಸರಿಪಡಿಸಿದ್ದರು.
For More Updates Join our WhatsApp Group :
