ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್ಟಿ ಅಧಿಕಾರಿಗಳು ನೋಟಿಸ್ ನೀಡಿ ತೆರಿಗೆ, ಅದಕ್ಕೆ ಬಡ್ಡಿ, ಇತರ ಬಡ್ಡಿ ಸೇರಿ ಆರ್ಥಿಕವಾಗಿ ಹೊರೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರ ಕಾರಣ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಬೆನ್ನಲ್ಲೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ. ಜಿಎಸ್ಟಿ ವ್ಯವಸ್ಥೆ ಬಗ್ಗೆ ವಿವರಣೆ ಕೊಟ್ಟಿದ್ದಾರೆ.

ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸುತ್ತಿರುವ ಬಗ್ಗೆ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್ ಟಿ ಶಾಕ್ ಕೊಟ್ಡಿರುವಂಥದ್ದು ಅತ್ಯಂತ ಖಂಡನೀಯ. ಜಿಎಸ್ ಟಿ ಕಾನೂನು ಅಡಿಯಲ್ಲಿ ವ್ಯಾಪಾರ ವಹಿವಾಟು ಮಾಡಲು ಕೆಲವು ರಿಯಾಯ್ತಿ ಇದೆ. ಆ ರಿಯಾಯಿತಿ ನಂತರ ತೆರಿಗೆ ಕಟ್ಟಬೇಕೆಂಬ ಪದ್ಧತಿ ಇದೆ. ರಾಜ್ಯ ಸರ್ಕಾರವೇ ಬಲವಂತವಾಗಿ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ದೂರಿದ್ದರು.
GST ಕೌನ್ಸಿಲ್ ನಿರ್ಧಾರಕ್ಕೆ ರಾಜ್ಯ ಸರ್ಕಾರ ಹೊಣೆ ಅಲ್ಲ ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ರಾಮಲಿಂಗಾ ರೆಡ್ಡಿ ಅವರು, ”ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ನಿಂದ ತೆರಿಗೆ ನೋಟೀಸ್ ನೀಡಲಾಗುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ಹೊಣೆ ಎಂದು ಗೂಬೆ ಕೂರಿಸುತ್ತಿರುವ ಬಿ.ಜೆ.ಪಿ ಅವರೇ, ಮಗುವನ್ನು ಅಳುವಂತೆ ಮಾಡುವುದು ನೀವೇ, ನಂತರ ತೊಟ್ಟಿಲು ತೂಗುವುದು ನೀವೇ?. ಎಷ್ಟು ಕಾಲದ ಮೇಲೆಯೂ ಡ್ರಾಮವನ್ನು ಮುಂದುವರಿಸುವ ಇರಾದೆ ನಿಮಗಿದೆ?” ಎಂದು ಪ್ರಶ್ನಿಸಿದ್ದಾರೆ.
GST ವ್ಯವಸ್ಥೆಯು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಜಿ ಎಸ್ ಟಿ ಕೌನ್ಸಿಲ್ ಕೂಡ ಕೇಂದ್ರ ಸರ್ಕಾರದಡಿಯಲ್ಲಿ ಕೆಲಸ ಮಾಡುತ್ತದೆ ಎಂಬುದು ತಮಗೆ ತಿಳಿದಿಲ್ಲವೇ? ಅಥವಾ ತಿಳಿದು ಕೂಡ ಅಸಹಾಯಕರಾಗಿ, ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ತಾಕತ್ತಿಲ್ಲದೆ ಜನರನ್ನು ದಾರಿ ತಪ್ಪಿಸಲು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ತಮ್ಮಹುನ್ನಾರವೇ? ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.