ಲಖನೌ: ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ ಹಿನ್ನೆಲೆ ಆಟಗಾರರ ಹರಾಜು ವೇಳೆ, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೀವ್ ಶುಕ್ಲಾ ಅವರು, ಸರ್ಕಾರ ಈ ಕುರಿತು ಅಗತ್ಯ ಅನುಮತಿ ನೀಡಿದರೆ ಭಾರತವು ನೆರೆಯ ದೇಶ ಪಾಕಿಸ್ತಾಕ್ಕೆ ಪ್ರಯಾಣಿಸಬಹುದು. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. 2026ರ ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ಬರುವ ಬಗ್ಗೆ ಪಾಕಿಸ್ತಾನ ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬ್ಬಹುದು, ಆದರೆ ನಾವು ಭಾರತ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ” ಎಂದು ತಿಳಿಸಿದರು.
ಮುಂದಿನ ವರ್ಷ ಫೆಬ್ರವರಿ – ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿದೆ. ಆದರೆ, ಕೆಲ ದಿನಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಅಲ್ಲದೇ ಹೈಬ್ರಿಡ್ ಮಾದರಿಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ಒತ್ತಡ ಹೇರುತ್ತಿದೆ ಎಂದು ಆರೋಪಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೆ ರಾಜೀವ್ ಶುಕ್ಲಾ ಅವರ ಈ ಹೇಳಿಕೆ ಭಾರಿ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಫೆಬ್ರವರಿ 19 ರಂದು ಕರಾಚಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದ್ದು, ಮಾರ್ಚ್ 9 ರಂದು ಲಾಹೋರ್‌ನಲ್ಲಿ ಕೊನೆಗೊಳ್ಳಲಿದೆ. ಮಾರ್ಚ್ 10 ರಂದು ಮೀಸಲು ದಿನವನ್ನು ಇರಿಸಲಾಗಿದೆ.