ಮಂಗಳೂರು: ಅಮ್ಮನೆಂದರೆ ಮಕ್ಕಳಿಗೆ ಕಣ್ಣಿಗೆ ಕಾಣುವ ಏಕೈಕ ದೇವರು. ಅಮ್ಮನಿಗೆ ಸಮಸ್ಯೆಯಾದರೆ ಮಕ್ಕಳಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಇದೇ ರೀತಿ ತನ್ನ ತಾಯಿಗೆ ಫೈಲೇರಿಯಾ ಆಗಲು ಕಾರಣವಾಗಿದ್ದ ಸೊಳ್ಳೆ ನಿರ್ನಾಮಕ್ಕೆ ಪಣ ತೊಟ್ಟ ವ್ಯಕ್ತಿ ಇದೀಗ ಸೊಳ್ಳೆಯನ್ನು ಸೆರೆ ಹಿಡಿದು ಸಾಯಿಸುವ ಯಂತ್ರವೊಂದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಕಾರದಲ್ಲಿ ಗುಡ್ನೈಟ್ ಲಿಕ್ವಿಡ್ನ ಗಾತ್ರಕ್ಕಿಂತ ತುಸು ದೊಡ್ಡದಾಗಿರುವ ಇದು ಮೊಝಿಕ್ವಿಟ್. ಇದಕ್ಕೆ ಯಾವುದೇ ಲಿಕ್ವಿಡ್ ಹಾಕಬೇಕಿಲ್ಲ. ವಿದ್ಯುತ್ಗೆ ಸಂಪರ್ಕಿಸಿದರೆ ಮನೆಯಲ್ಲಿ ಓಡಾಡಿಕೊಂಡಿರುವ ಸೊಳ್ಳೆಗಳು ಇದಕ್ಕೆ ಬಂದು ಬೀಳುತ್ತವೆ. ಸೊಳ್ಳೆ ಇದರೊಳಗೆ ಸಿಲುಕಿಕೊಂಡು ಸಾಯುತ್ತವೆ. ಇಂತಹ ಒಂದು ಯಂತ್ರ ತಯಾರಿಸಿದವರು ಮಂಗಳೂರಿನ ಕೊಟ್ಟಾರದ ಓರ್ವಿನ್ ನೊರನ್ಹಾ. ತಮ್ಮ 20 ವರ್ಷಗಳ ಸಂಶೋಧನೆಯಲ್ಲಿ ಅವರು ಈ ಯಂತ್ರವನ್ನು ಹೊರ ತಂದಿದ್ದಾರೆ.
ಓರ್ವಿನ್ ನೊರೊನ್ಹಾ ಅವರ ತಾಯಿಗೆ ಫೈಲೇರಿಯಾ ಬಂದು ಕಾಲು ಊದಿಕೊಂಡಿತ್ತು. ಇದಕ್ಕೆ ಸೊಳ್ಳೆ ಕಚ್ಚಿದ್ದೇ ಕಾರಣವಾಗಿತ್ತು. ಇದನ್ನು ಸಣ್ಣ ವಯಸ್ಸಿನಲ್ಲಿ ಅರಿತ ಓರ್ವಿನ್ ನೊರೊನಾ ಅವರು ಸೊಳ್ಳೆ ನಿರ್ಮೂಲನೆ ಗುರಿ ಇಟ್ಟುಕೊಂಡಿದ್ದರು. 2001ರಲ್ಲಿ ಹೈದರಾಬಾದ್ನಲ್ಲಿ ಅಮೆರಿಕದ ಮೊಸ್ಕಿಟೋ ಮ್ಯಾಗ್ನೆಟ್ ಎಂಬ ಯಂತ್ರವನ್ನು ನೋಡಿದ್ದರು. ಅದಕ್ಕೆ ಸುಮಾರು 1.10 ಲಕ್ಷ ಖರ್ಚು ಮತ್ತು ನಿರ್ವಹಣೆಗೆ ಪ್ರತಿ ತಿಂಗಳು 5 ಸಾವಿರ ವ್ಯಯಿಸಬೇಕಿತ್ತು. ಅಷ್ಟು ಮಾತ್ರವಲ್ಲದೇ ಅದಕ್ಕೆ ಬೇಕಾದ ವಸ್ತುಗಳು ಭಾರತದಲ್ಲಿ ಲಭ್ಯವಿರಲಿಲ್ಲ. ಇದನ್ನು ನೋಡಿದ ಓರ್ವಿನ್ ಅವರು ಕಡಿಮೆ ಖರ್ಚಿನಲ್ಲಿ ಸೊಳ್ಳೆ ಸೆರೆ ಹಿಡಿಯುವ ಯಂತ್ರವನ್ನು ತಯಾರಿಸಿದ್ದಾರೆ.
ಓರ್ವಿನ್ ಅವರು ಮೂರು ಬಗೆಯ ಸೊಳ್ಳೆ ಯಂತ್ರವನ್ನು ತಯಾರಿಸಿದ್ದಾರೆ. ದನದ ಕೊಟ್ಟಿಗೆಯಲ್ಲಿ ಇಡಬಹುದಾದ ದೊಡ್ಡ ಗಾತ್ರದ ಯಂತ್ರ ಮತ್ತು ಮನೆಯೊಳಗೆ ಇಡಬಹುದಾದ ಎರಡು ಬಗೆಯ ಯಂತ್ರಗಳನ್ನು ತಯಾರಿಸಿದ್ದಾರೆ. ಸುಮಾರು 1,250 ರಿಂದ 3,000 ದವರೆಗೆ ಇದರ ದರವಿದೆ