ಬೆಂಗಳೂರು: ಮಂಡ್ಯದಲ್ಲಿ ಡಿಸಂಬರ್ 20,21 ಮತ್ತು 22ರಂದು ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಬರಹಗಾರ, ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪನವರು ಆಯ್ಕೆಯಾಗಿದ್ದಾರೆ. ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಆಯ್ಕೆಯ ನಂತರ ನಾಡೋಜ ಡಾ. ಮಹೇಶ ಜೋಷಿಯವರು ದೂರವಾಣಿಯ ಮೂಲಕ ಗೊ.ರು.ಚ ಅವರಿಗೆ ವಿಷಯವನ್ನು ತಿಳಿಸಿ ಅಭಿನಂದಿಸಿದಾಗ ಅವರು ಅತ್ಯಂತ ಸಂತೋಷದಿಂದ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಮೊದಲ ಸಲ ಸಮ್ಮೇಳನಾದಧ ಕ್ಷರ ಆಯ್ಕೆ ಸಾರ್ವಜನಿಕವಾಗಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು ಸಾರ್ವಜನಿಕರಿಂದಲೇ ಅನೇಕ ಹೆಸರುಗಳು ಪ್ರಸ್ತಾಪವಾಗಿದ್ದು ವಿಶೇಷವಾಗಿತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ (33)ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಸ್ತಾಪವಿದ್ದು ಇದರಲ್ಲಿ ಸಮ್ಮೇಳನಾಧ್ಯಕ್ಷತೆಯ ಕುರಿತು ಯಾವ ಮಾನದಂಡವನ್ನು ನಿಗಧಿಪಡಿಸಿಲ್ಲದ ಹಿನ್ನೆಲೆಯಲ್ಲಿ ಎಲ್ಲಾ ಅಭಿಪ್ರಾಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಕ್ತವಾಗಿ ಸ್ವೀಕರಿಸಿ ಪರಿಶೀಲಿಸಿತು.
ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಲವಾರು ಹೆಸರುಗಳು ಪರಿಗಣನೆಗೆ ಬಂದವು. ಹಿರಿತನ ಮತ್ತು ಕನ್ನಡಕ್ಕೆ ಸಲ್ಲಿಸಿರುವ ಅಪಾರ ಸೇವೆಯ ಹಿನ್ನೆಲೆಯಲ್ಲಿ ಗೊ.ರು. ಚನ್ನಬಸಪ್ಪನವರ ಹೆಸರನ್ನು ಎಲ್ಲರೂ ಏಕಕಂಠದಿಂದ ಒಪ್ಪಿಗೆ ಸೂಚಿಸಿ ಸರ್ವಾನುಮತದ ಆಯ್ಕೆಗೆ ಕಾರಣರಾದರು. ಪರಿಶೀಲನೆಗೆ ಬಂದ ಹೆಸರುಗಳಾದ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪ ನಾಗರಾಜಯ್ಯ, ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಸುಧಾಮೂರ್ತಿ, ಡಾ. ಲತಾ ರಾಜಶೇಖರ್, ನಾ. ಮೊಗಸಾಲೆ ಅವರಿಗಿಂತ ಗೊ.ರು. ಚನ್ನಬಸಪ್ಪನವರ (94 ವರ್ಷ, ಆರು ತಿಂಗಳು) ಹಿರಿತನವನ್ನು ಆಯ್ಕೆ ಸಂದರ್ಭದಲ್ಲಿ ಗಮನಿಸಲಾಯಿತು, ಜಾನಪದ ಭೀಷ್ಮ ಎನ್ನಿಸಿಕೊಂಡು ಅವರು ನಾಡು-ನುಡಿ-ನೆಲ-ಜಲದ ಕುರಿತು ಸದಾ ತುಡಿಯುತ್ತಿರುವ ಶ್ರೇಷ್ಠ ಚಿಂತಾ ಎನ್ನುವುದನ್ನು ಪರಿಗಣಿಸಲಾಯಿತು. ಅವರು ಕನ್ನಡಕ್ಕೆ ನೀಡಿದ ಕೊಡುಗೆ, ಕನ್ನಡ ಸಾಹಿತ ಪರಿಷತ್ತನ್ನು ಬೆಳೆಸುವಲ್ಲಿ ವಹಿಸಿದ ಪಾತ್ರವನ್ನೂ ಈ ಸಂದರ್ಭದಲ್ಲಿ ಗಮನಿಸಲಾಯಿತು ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿ ಸಮ್ಮೇಳನಾಧ್ಯಕ್ಷತೆಗೆ ಒಬ್ಬರನ್ನು ಮಾತ್ರ ಆಯೆ ಮಾಡುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಗೊ.ರು.ಚ ಅವರನ್ನು ವರಿಗಣಿಸಲಾಯಿತು ಉಳಿದವರೂ ಸಮ್ಮೇಳನಾಧ್ಯಕ್ಷತೆಗೆ ಅರ್ಹರಾಗಿದ್ದು ಅವಕಾಶವಿದ್ದರೆ ಎಲ್ಲರನ್ನೂ ಆಯ್ಕೆ ಮಾಡಲಾಗುತ್ತಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಅರ್ಥಪೂರ್ಣವಾಗಿ ನುಡಿದಿದ್ದಾರೆ.