ಭಾರತ & ಅಮೆರಿಕ ಸಂಬಂಧ ವೃದ್ಧಿಗೆ ಎರಡೂ ದೇಶಗಳು ಮಹತ್ವ ನೀಡಿವೆ. ಅದರಲ್ಲೂ ಅಮೆರಿಕ ಆಗಾಗ ಬಣ್ಣ ಬದಲಾಯಿಸಿ, ಭಾರತ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂಬ ಆರೋಪಗಳ ನಡುವೆ ಕೂಡ ಇದೀಗ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ರಷ್ಯಾ & ಉಕ್ರೇನ್ ಯುದ್ಧ ನಡೆಯುವ ಸಮಯದಲ್ಲೇ, ಅಮೆರಿಕ ಮಿಲಿಟರಿ ಕೇಂದ್ರ ಕಚೇರಿಯಿಂದ ಭಾರತದ ಜೊತೆಗಿನ ಸಂಬಂಧದ ಬಗ್ಗೆ ಮಹತ್ವದ ಹೇಳಿಕೆ ಇದೀಗ ಹೊರಬಿದ್ದಿದೆ.
ಹಾಗಾದ್ರೆ ಅಮೆರಿಕದ ಸೇನಾ ಕಚೇರಿ, ಭಾರತದ ಬಗ್ಗೆ ಹೇಳಿದ್ದು ಏನು? ಬನ್ನಿ ತಿಳಿಯೋಣ.
ನಿಮಗೆಲ್ಲಾ ಗೊತ್ತಿರುವಂತೆ ಜಾಗತಿಕವಾಗಿ ಈಗ 2 ಭಯಾನಕ ಯುದ್ಧಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಕೂಡ ಭಾರತ ಯಾವುದೇ ಗುಂಪಿನ ಜೊತೆಗೆ ಸೇರಿಕೊಂಡಿಲ್ಲ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧವು ಭಯಾನಕವಾಗಿದೆ, ಅದರ ಜೊತೆಗೆ ಕಳೆದ 10 ತಿಂಗಳಿಂದಲೂ ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಘೋರ ಕಾಳಗ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಕೂಡ ಭಾರತ ತನ್ನ ತಟಸ್ಥ ನೀತಿ ಕಾಪಾಡಿಕೊಂಡು ಬಂದಿದೆ. ಹೀಗಾಗಿ ಭಾರತಕ್ಕೆ ಲಾಭವು ಕೂಡ ಆಗುತ್ತಿದೆ. ಒಂದ್ಕಡೆ ಅಮೆರಿಕ ಇದೀಗ ಉಕ್ರೇನ್ & ಇಸ್ರೇಲ್ ಪರ ನಿಂತಿದೆ. ಹೀಗಿದ್ದಾಗ ರಷ್ಯಾ ಮಾತ್ರ ಉಕ್ರೇನ್ ವಿರುದ್ಧ ಹೋರಾಟ ನಡೆಸುತ್ತಾ ಪ್ಯಾಲೆಸ್ತೀನ್ ಪರವೂ ನಿಂತಿದೆ. ಇದೆಲ್ಲಾ ನಡೆಯುವಾಗಲೇ ಅಮೆರಿಕ ಇದೀಗ ಭಾರತದ ಜೊತೆಗಿನ ಸಂಬಂಧದ ಬಗ್ಗೆ ಹೇಳಿಕೆ ನೀಡಿದೆ.
ಭಾರತದ ರಕ್ಷಣಾ ಸಚಿವರು ಅಮೆರಿಕಗೆ!
ಅಮೆರಿಕದ ಕೇಂದ್ರ ಕಚೇರಿ ಇರುವುದು ಪೆಂಟಗಾನ್ ಪ್ರದೇಶದಲ್ಲಿ, ಹೀಗಾಗಿ ಅಮೆರಿಕ ಸೇನೆ ಯಾವುದೇ ಹೇಳಿಕೆ ನೀಡಿದರೂ ಅದನ್ನು ‘ಪೆಂಟಗಾನ್ ಹೇಳಿಕೆ’ ಎಂದು ಕರೆಯಲಾಗುತ್ತದೆ. ಇದೀಗ ಭಾರತ & ಅಮೆರಿಕದ ನಡುವೆ ಇರುವ, ಮಿಲಿಟರಿ ಸಂಬಂಧದ ಬಗ್ಗೆ ‘ಪೆಂಟಗಾನ್ ಹೇಳಿಕೆ’ ಮಹತ್ವ ಪಡೆದುಕೊಂಡಿದೆ. ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಆಗಸ್ಟ್ 23 ರಂದು ಪೆಂಟಗನ್ಗೆ ಭೇಟಿ ನೀಡಲಿದ್ದಾರೆ. ಇದೇ ಸಮಯದಲ್ಲಿ ಅಮೆರಿಕದ ಸೇನಾ ಕೇಂದ್ರ ಕಚೇರಿ ಭಾರತದ ಜೊತೆಗಿನ ಸಂಬಂಧ ವೃದ್ಧಿ ಬಗ್ಗೆ ಮಾತನಾಡಿದೆ.
ಅಮೆರಿಕ + ಭಾರತ = ಮಹಾನ್ ಶಕ್ತಿ!
‘ಪೆಂಟಗಾನ್’ ನೀಡಿರುವ ಹೊಸ ಹೇಳಿಕೆಯಂತೆ, ಭಾರತದ ಜೊತೆಗಿನ ಬಾಂಧವ್ಯ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ ಎಂದು ವಿವರಿಸಲಾಗಿದೆ. ಹಾಗೆಯೇ ಇಂಡೋ & ಪೆಸಿಫಿಕ್ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಮೇಲೆಯು ಈ ಸಂಬಂಧ ಮಹತ್ವದ ಪರಿಣಾಮ ಬೀರಲಿದೆ ಎಂದಿದೆ ಅಮೆರಿಕದ ಮಿಲಿಟರಿ ಕೇಂದ್ರ ಕಚೇರಿ. ಮತ್ತೊಂದು ಕಡೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಸ್ಟ್ 23 ರಂದು ಪೆಂಟಗನ್ಗೆ ಭೇಟಿ ನೀಡಲಿದ್ದು, ಇದೇ ಸಮಯದಲ್ಲಿ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.