ಧಾರವಾಡ: ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯವು ಪ್ರತಿವರ್ಷ ನಡೆಸುವ ಕೃಷಿ ಮೇಳದ ಪ್ರಮುಖ ಆಕರ್ಷಣೆ ಎಂದರೆ ಅದು ಫಲ, ಪುಷ್ಪ ಪ್ರದರ್ಶನ.
ಪ್ರಸಕ್ತ ವರ್ಷದ ಕೃಷಿ ಮೇಳದಲ್ಲಿ ಮತ್ತೊಮ್ಮೆ ಆಕರ್ಷಣೀಯ ಕೇಂದ್ರವಾಗಿರುವುದು ಫಲ, ಪುಷ್ಪ ಪ್ರದರ್ಶನ. ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿರುವ ಫಲ, ಪುಷ್ಪ ಪ್ರದರ್ಶನ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ.
ವಿವಿಧ ಪ್ರಬೇಧದ ಹೂವುಗಳು, ವಿವಿಧ ತಳಿಯ ಹಣ್ಣುಗಳು, ಕಲ್ಲಂಗಡಿಯಲ್ಲಿ ಅರಳಿದ ಮಹಾನ್ ನಾಯಕರ ಭಾವಚಿತ್ರ, ತೆಂಗಿನಕಾಯಿಯ ಕಲಾಕೃತಿ, ಕಸದಿಂದ ರಸ ಎಂಬಂತೆ ತೆಂಗಿನ ಚಿಪ್ಪಿನಲ್ಲಿ ಮಾಡಿದ ವಿವಿಧ ಅಲಂಕಾರಿಕ ವಸ್ತುಗಳು ಸೇರಿದಂತೆ ಅನೇಕ ಫಲ, ಪುಷ್ಪಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಕೃಷಿ ಮೇಳದ ಭಾಗವಾಗಿರುವ ಈ ಫಲ, ಪುಷ್ಪ ಪ್ರದರ್ಶನ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೇ ವಿವಿಧ ಹಣ್ಣು ಹಾಗೂ ಹೂವುಗಳನ್ನು ಬೆಳೆಯುವುದರಿಂದ ಲಾಭ ಕಂಡುಕೊಳ್ಳಬಹುದು ಎಂಬ ಮಾಹಿತಿಯನ್ನೂ ನೀಡುತ್ತಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರ ಪ್ರವೇಶಿಸುತ್ತಿದ್ದಂತೆ ಮೊದಲಿಗೆ ನಮ್ಮ ಕಣ್ಣಿಗೆ ಬೀಳುವುದೇ ರಾಣಿ ಚೆನ್ನಮ್ಮನ ಮೂರ್ತಿ. ಕೋಟೆಯ ಆಕೃತಿ ಮಾಡಿ ಅದರ ಮೇಲೆ ರಾಣಿ ಚೆನ್ನಮ್ಮನ ಮೂರ್ತಿ ಇಟ್ಟಿರುವುದು ಈ ಬಾರಿಯ ಪ್ರಮುಖ ಆಕರ್ಷಣೆ ಆಗಿದೆ. ಈ ಕುರಿತು ನೋಡುಗರ ಸಂತಸ ಪಟ್ಟರು. ಒಟ್ಟಾರೆ ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿರುವ ಫಲ, ಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಕೃಷಿ ವಿಶ್ವವಿದ್ಯಾಲಯಕ್ಕೆ ಲಗ್ಗೆ ಇಟ್ಟಿದ್ದು ಕಂಡು ಬಂತು.