ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ಟ್ವಿಸ್ಟ್..!

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ಟ್ವಿಸ್ಟ್​!

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಕೇಸ್​ನಲ್ಲಿ ಕೂಡ ಒಂದೊಂದೆ ಸತ್ಯಗಳು ಹೊರಬರುತ್ತಿವೆ. ಇತ್ತೀಚೆಗೆ ಸುಜಾತ ಭಟ್ ತಮ್ಮ ಮಗಳೆಂದು ಅನನ್ಯಾ ಭಟ್​ ಫೋಟೋವೊಂದನ್ನು​ ತೋರಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಿರುವಾಗಲೇ ಕೇಸ್ ವಾಪಸ್ ಪಡೆಯುವುದಾಗಿ ಸುಜಾತ ಭಟ್ ಹೇಳಿದ್ದು, ಅವರ ಈ ನಡೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಅನನ್ಯ ಭಟ್ ಪ್ರಕರಣವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಪ್ರಕರಣದ ವಿವರ ನೀಡುವಂತೆ ಸುಜಾತ ಭಟ್​ಗೆ ನೋಟಿಸ್ ನೀಡಿದೆ. ಆದರೆ ಎಸ್ಐಟಿ ನೋಟಿಸ್​ಗೆ ಉತ್ತರಿಸದ ಸುಜಾತ ಭಟ್, ಅವರದ್ದೇ ಎನ್ನಲಾದ ಆಡಿಯೋ ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಕೇಸ್ ಹಿಂಪಡೆಯುವ ಬಗ್ಗೆ ಎಸ್​​ಐಟಿಗೆ ಹೇಳಿಲ್ಲವೆಂದು ಎಸ್​​ಐಟಿ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಕೇಸ್ ಬಗ್ಗೆ ಒಂದು ಹಂತದ ಮಾಹಿತಿ ಪಡೆದಿರುವ ಎಸ್‌ಐಟಿ, ಸುಜಾತ ಭಟ್‌ ಹಿನ್ನೆಲೆ, ಕುಟುಂಬದ ಮಾಹಿತಿ, 2003ರಲ್ಲಿ ಅನನ್ಯ ಭಟ್‌ ಕಾಣೆಯಾಗಿದ್ದ ಬಗ್ಗೆ ಸಲ್ಲಿಸಿದ್ದ ದೂರು, ಇದೇ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರು ಎಲ್ಲದರ ಮಾಹಿತಿ ಪಡೆದುಕೊಂಡಿದೆ.

ಹೋರಾಟಗಾರರಿಗೂ ಯಾಮಾರಿಸಿದರಾ ಸುಜಾತಾ ಭಟ್?

ಇನ್ನು ಮಗಳು ಅನನ್ಯ ಭಟ್ ನಾಪತ್ತೆ ವಿಚಾರವಾಗಿ ಸುಜಾತಾ ಭಟ್​​ ಹೋರಾಟಗಾರರಿಗೂ ಯಾಮಾರಿಸಿದರಾ ಎಂಬ ಅನುಮಾನುಗಳು ಸಹ ಮೂಡಿವೆ. ದೂರಿನಲ್ಲಿ ಹೇಳಿರುವುದನ್ನೇ ಹೋರಾಟಗಾರರಿಗೂ ಸುಜಾತಾ ಹೇಳಿದ್ದು, ಸತ್ಯ ಎಂದು ನಾಯಕರು ನಂಬಿದ್ದರು. ಅಷ್ಟೇ ಅಲ್ಲದೆ ಕೆಲ ದಿನಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ‌ಮನೆಯಲ್ಲಿಯೇ ಸುಜಾತಾ ತಂಗಿದ್ದರು.

ಸುಜಾತಾ ಅವರಿಗೆ ಮಗಳು ಇದ್ದಳು ಎಂಬ ಬಗ್ಗೆ ದಾಖಲೆ ತೆಗೆಯಲು ಹೋರಾಟಗಾರರು ಮುಂದಾಗಿದ್ದರು. ಆದರೆ ದಾಖಲೆ ತೆಗೆಯಲು ಹಿಂದೇಟು ಅವರು ಹಾಕಿದ್ದರು. ಅದಾದ ಬಳಿಕ ಒಂದೊಂದಾಗಿ ಅಸಲಿಯತ್ತು ಬಹಿರಂಗಗೊಳ್ಳುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಸುಜಾತಾ ಭಟ್​ಗೆ ಗೇಟ್ ಪಾಸ್​ ನೀಡಿದ್ದಾಗಿ ಹೋರಾಟಗಾರರ ತಂಡದ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಆಗಸ್ಟ್ 19ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ತಿಮರೋಡಿಯಿಂದ ತೆರಳಿದ್ದ ಸುಜಾತಾ, ಹೋರಾಟಕ್ಕೆ ಹಿನ್ನಡೆ ಸಾಧ್ಯತೆ ಹಿನ್ನೆಲೆ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದರು. ದಾಖಲೆಗಳಿದ್ದರೆ ಎಸ್ಐಟಿ‌ ಅಧಿಕಾರಿಗಳಿಗೆ ನೀಡಿ ಎಂದು ನಾಯಕರು ಹೇಳಿದ್ದಾರೆ.

ಪ್ರಕರಣದ ಸೃಷ್ಟಿಕರ್ತರಿಗೂ ನಡುಕು ಹುಟ್ಟಿಸುತ್ತಾ ಎಸ್ಐಟಿ ತನಿಖೆ?

ಪ್ರಕರಣ ಎಸ್ಐಟಿಗೆ ಹಸ್ತಾಂತರ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್ ಆಗಿದ್ದು, ಸುಜಾತ ಭಟ್ ವಿಚಾರಣೆ ನಡೆಸಲಿದ್ದಾರೆ. ಆ ಮೂಲಕ ಅನನ್ಯಾ ಪ್ರಕರಣದ ಪೂರ್ವಾಪರ ಕೆದಕಲು ಎಸ್ಐಟಿ ಮುಂದಾಗಿದೆ. ಶವ ಹೂತ ಕೇಸ್​ನಲ್ಲಿ ಅನನ್ಯ ಕೇಸ್ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗಾಗಲೇ ಪ್ರಕರಣದ ಆಳ ಅಗಲ ತನಿಖೆ ನಡೆಸಿದ್ದು, ಅನನ್ಯ ಭಟ್ ಅಸ್ತಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *