ಮತ್ತೆ ಬಾರಿ ಚರ್ಚೆಯಾಗುತ್ತಿದೆ ಜಾತಿಗಣದಿ ವರದಿ : ಒಕ್ಕಲಿಗ ಸಮುದಾಯದ ನಿಲುವೇನು?

ರಾಜ್ಯದಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ಜಾತಿಗಣತಿ ವರದಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಈಗ ಭಾರಿ ಚರ್ಚೆಯ ವಿಷಯವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ಜಾತಿಗಣತಿ ವರದಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಈಗ ಭಾರಿ ಚರ್ಚೆಯ ವಿಷಯವಾಗಿದೆ.

ಕೆಲವು ಸಮುದಾಯಗಳ ಜನಸಂಖ್ಯೆ ಏರಿಳಿತಗಳಾಗಿರುವ ಬಗ್ಗೆ ವದಂತಿಗಳಿರುವುದರಿಂದ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ವರದಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಜಾತಿ ಜನಗಣತಿಯ ವರದಿ ಹಳೆಯದಾಗಿದ್ದು, ಪ್ರಸ್ತುತ ದತ್ತಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. 9 ವರ್ಷಗಳ ಹಿಂದೆ ಸಂಗ್ರಹಿಸಲಾದ ಅಂಕಿ-ಅಂಶಗಳನ್ನು ಪ್ರಸ್ತುತ ಕಾಲಮಾನದಲ್ಲಿ ಅಂಗೀಕರಿಸುವುದು ಸರಿಯಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಂಸದ ಡಿ.ಕೆ.ಸುರೇಶ್, ಸಚಿವ ಕೃಷ್ಣಬೈರೇಗೌಡ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಜನಾಂಗಕ್ಕೆ ಅನಾನುಕೂಲವಾಗಬಾರದು ಎಂಬುದು ಉದ್ದೇಶ. ಕಾಂತರಾಜು ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯೂ ಅವೈಜ್ಞಾನಿಕವಾಗಿದೆ. ಹತ್ತು ವರ್ಷಗಳಷ್ಟು ಹಳೆಯ ಮಾಹಿತಿಯನ್ನು ಇದು ಒಳಗೊಂಡಿದೆ. ಆ ನಂತರ ಆಗಿರುವ ಗಮನಾರ್ಹ ಬದಲಾವಣೆಗಳ ಮಾಹಿತಿ ಇಲ್ಲ. ಹೀಗಾಗಿ ವರದಿ ಅಪ್ರಸ್ತುತ ಮತ್ತು ಅವೈಜ್ಞಾನಿಕ. ಈ ವರದಿಯನ್ನು ಹಲವು ಸಮುದಾಯ ಹಾಗೂ ಸಂಘಟನೆಗಳು ಈಗಾಗಲೇ ವಿರೋಧಿಸಿವೆ. ಇದನ್ನು ಗಮನದಲ್ಲಿರಿಸಿಕೊಂಡು ಮರು ಸಮೀಕ್ಷೆ ಮಾಡಿಸುವುದು ಸೂಕ್ತ. ಸರ್ಕಾರಕ್ಕೆ ಸರ್ವ ಜನರ ಹಿತ ಮುಖ್ಯವಾಗಬೇಕೆಂಬುದೇ ಒಕ್ಕಲಿಗ ಸಮುದಾಯದ ಆಶಯ ಎಂದು ರಾಜ್ಯ ಒಕ್ಕಲಿಗರ ಸಂಘ ಹೇಳಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಸಿರುವ ಜಾತಿಗಣತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬಾರದು. ಹೊಸದಾಗಿ ವೈಜ್ಞಾನಿಕವಾಗಿ ರಾಜ್ಯದ ಎಲ್ಲ ಸಮುದಾಯಗಳಿಗೆ ಅನುಕೂಲವಾಗುವಂತೆ ಎಲ್ಲ ಜನವಸತಿಗಳಿಗೆ ಭೇಟಿ ನೀಡಿ, ಮರು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯ ಮಾಡಿದೆ.

ಪ್ರತೀ ಮನೆ ಮನೆಗೆ ಭೇಟಿ ನೀಡಿ ಅಗತ್ಯವಿರುವ ಮಾಹಿತಿ ಸಂಗ್ರಹಿಸಿ, ವರದಿಯನ್ನು ಕಾಲಮಿತಿಯಲ್ಲಿ ಪಡೆಯಬೇಕು ಹಾಗೂ ಸಾರ್ವಜನಿಕವಾಗಿ ಮುಕ್ತ ಚರ್ಚೆಗೆ ಅವಕಾಶ ನೀಡಿದ ಬಳಿಕ ಅನುಷ್ಠಾನಕ್ಕೆ ತರಬೇಕೆಂಬುದು ಸಂಘದ ಆಗ್ರಹ.

ರಾಜ್ಯದಲ್ಲಿ ಜಾತಿಗಣತಿ ವರದಿ ಅನುಷ್ಠಾನ ಮಾಡಲು ನಮ್ಮ ಯಾವುದೇ ಆಕ್ಷೇಪವಿಲ್ಲ. ನಾವು ಮುಕ್ತವಾಗಿ ಸ್ವಾಗತ ಮಾಡುತ್ತೇವೆ. ಆದರೆ, ಎಲ್ಲ ಜನಾಂಗಕ್ಕೂ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮರು ಸಮೀಕ್ಷೆ ನಡೆಸಬೇಕು. ನೈಜವಾದ ವರದಿಯನ್ನು ಪಡೆದು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒಕ್ಕಲಿಗರ ಸಂಘ ಒತ್ತಾಯಿಸಿದೆ.

Leave a Reply

Your email address will not be published. Required fields are marked *