ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆ ರಸ್ತೆ ಬದಿ, ಮಾರುಕಟ್ಟೆಗಳಲ್ಲಿ ಹೆಚ್ಚು ಉತ್ಪತ್ತಿಯಾಗಿದ್ದ ತ್ಯಾಜ್ಯವನ್ನು ಕಳೆದೆರಡು ದಿನಗಳಿಂದ ಪರಿಣಾಮಕಾರಿಯಾಗಿ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
ದಸರಾ ಹಬ್ಬದ ಹಿನ್ನೆಲೆ ಆಯುಧ ಪೂಜೆಗಾಗಿ ನಗರದ ಎಲ್ಲ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಬಾಳೆ ಕಂದು, ಬೂದು ಕುಂಬಳಕಾಯಿ, ಎಲೆಗಳು ಹಾಗೂ ಹೂವು ಮಾರಾಟ ಮಾಡಲಾಗಿದೆ. ಇದರಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಸ್ಥಳದಲ್ಲೇ ಬಿಟ್ಟಿದ್ದು, ಅದನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಂಸ್ಥೆಯಿಂದ ನಿರಂತರವಾಗಿ ಹಾಗೂ ಪರಿಣಾಮಕಾರಿಯಾಗಿ ತೆರವು ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ನಗರದಲ್ಲಿ ನಿತ್ಯ ಸರಿಸುಮಾರು 4,900 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ದಸರಾ ಹಬ್ಬದ ಹಿನ್ನೆಲೆಯಲ್ಲಿ 12ನೇ ಅಕ್ಟೋಬರ್ ರಂದು 6,306 ಮೆಟ್ರಿಕ್ ಟನ್, 13 ರಂದು 5,561 ಮೆಟ್ರಿಕ್ ಟನ್ ಹಾಗೂ ಸೋಮವಾರ ಸುಮಾರು 5,866 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳು ಹಾಗೂ ಮಿಶ್ರ ತ್ಯಾಜ್ಯವನ್ನು ಲ್ಯಾಂಡ್ ಫಿಲ್ನಲ್ಲಿ ವಿಲೇವಾರಿ ಮಾಡಲಾಗಿದೆ ಎಂದಿದೆ.
ನಗರದಲ್ಲಿ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರುಕಟ್ಟೆ, ಗಾಂಧಿಬಜಾರ್, ದೇವಸಂದ್ರ ಮಾರುಕಟ್ಟೆ, ಕೆ.ಆರ್ ಪುರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ರಸಲ್ ಮಾರುಕಟ್ಟೆ, ಪಾಲಿಕೆ ಬಜಾರ್ ಸೇರಿದಂತೆ 12 ಮಾರುಕಟ್ಟೆಗಳಲ್ಲಿ ಕಳೆದ 2 ದಿನಗಳಲ್ಲಿ 414 ಮೆಟ್ರಿಕ್ ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ನಗರದ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚುವರಿಯಾಗಿ ತ್ಯಾಜ್ಯ ಉತ್ಪಾದನೆಯಾಗಿದ್ದ ಕಾರಣ ಆಯಾ ವಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಹಾಗೂ ಮಾರ್ಷಲ್ಗಳ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಜೆಸಿಬಿಗಳನ್ನು ಬಳಸಿಕೊಂಡು ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ಗಳಲ್ಲಿ 3/4 ಟ್ರಿಪ್ಗಳು ತುಂಬಿಕೊಂಡು ವಿಲೇವಾರಿ ಮಾಡುವ ಕೆಲಸ ಮಾಡಲಾಗಿದೆ ಎಂದು ಹೇಳಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ದಸರಾ ಹಬ್ಬದಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಕಾಲಮಿತಿಯೊಳಗಾಗಿ ತೆರವುಗೊಳಿಸುವ ಕೆಲಸ ಹಾಗೂ ರಸ್ತೆ ಬದಿ ಉತ್ಪತ್ತಿಯಾಗುವ ಕಸ ಸುರಿಯುವ ಸ್ಥಳಗಳನ್ನು ಕೂಡಾ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದಿದೆ.
3 ದಿನಗಳಲ್ಲಿ ತ್ಯಾಜ್ಯ ವಿಲೇವಾರಿಯಾದ ವಿವರ:
• ಅಕ್ಟೊಬರ್ 12 ರಂದು: 6,306 ಮೆಟ್ರಿಕ್ ಟನ್
• ಅಕ್ಟೊಬರ್ 13 ರಂದು: 5,561 ಮೆಟ್ರಿಕ್ ಟನ್
• ಅಕ್ಟೊಬರ್ 14 ರಂದು: 5,866 ಮೆಟ್ರಿಕ್ ಟನ್