ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ನೀಡಿರುವ 14 ಸೈಟ್ಗಳನ್ನ ಹಿಂತಿರುಗಿಸುವ ಕುರಿತ ಪತ್ರವನ್ನು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮುಡಾ ಕಚೇರಿಗೆ ಬಂದು ಕೊಟ್ಟು ಹೋಗಿದ್ದಾರೆ. ಈ ಕುರಿತು ಒಂದೆರಡು ದಿನಗಳಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಘನಂದನ್ ಮಾಹಿತಿ ನೀಡಿದರು.
ಇಂದು ಮುಡಾ ಕಚೇರಿಯ ಬಳಿ ಮುಡಾ ಕಮಿಷನರ್ ರಘುನಂದನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಸಿದ್ದರಾಮಯ್ಯ ಪತ್ನಿ ತಮಗೆ ನೀಡಿರುವ ಬದಲಿ ನಿವೇಶನಗಳನ್ನ ವಾಪಸ್ ನೀಡುವ ಪತ್ರವನ್ನು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನಮ್ಮ ಕಚೇರಿಗೆ ಬಂದು ಕೊಟ್ಟು ಹೊಗಿದ್ದಾರೆ. ಸ್ವಇಚ್ಛೆಯಿಂದ ಸೈಟ್ ವಾಪಸ್ ಕೊಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಕಾನೂನು ಪ್ರಕಾರ ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಲೋಕಾಯುಕ್ತ ಪೋಲೀಸರು ಕೆಲವು ದಾಖಲೆಗಳನ್ನ ಕೇಳಿ ಪತ್ರ ಬರೆದಿದ್ದು, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಇಡಿ ಕಡೆಯಿಂದ ಯಾವುದೇ ದಾಖಲೆ ಕೇಳಿಲ್ಲ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಜೊತೆಗೆ ಮುಡಾದ ಕೆಲ ಸಿಬ್ಬಂದಿಯನ್ನು ಕೂಡ ಲೋಕಾಯುಕ್ತರ ಸಹಾಯಕ್ಕೆ ಕಳುಹಿಸಲಾಗಿದೆ ಎಂದು ಮುಡಾ ಆಯುಕ್ತ ರಘನಂದನ್ ಮಾಧ್ಯಮಾಗಳಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಮುಡಾ ಪ್ರಕರಣ ತೀವ್ರ ಸಂಚಲನ ಮೂಡಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮೌನ ಮುರಿದು, ಸೋಮವಾರ ಪತ್ರ ಬರೆದಿದ್ದರು. ಜೊತೆಗೆ ವಿವಾದಕ್ಕೆ ಕಾರಣವಾಗಿರುವ 14 ಬದಲಿ ನಿವೇಶನಗಳನ್ನು ಮುಡಾಗೆ ಮರಳಿಸುವ ನಿರ್ಧಾರ ಪ್ರಕಟಿಸಿದ್ದರು.