ಕಾನೂನು-ಸುವ್ಯವಸ್ಥೆ ಕುಸಿತದಿಂದ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ವರ್ಚಸ್ಸಿಗೆ ಧಕ್ಕೆ: Shobha Karandlaje

ಕಾನೂನು-ಸುವ್ಯವಸ್ಥೆ ಕುಸಿತದಿಂದ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ವರ್ಚಸ್ಸಿಗೆ ಧಕ್ಕೆ: Shobha Karandlaje

ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತವಾಗಿದ್ದು, ಇದರಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲದಂತಾಗಿದೆ. ಅವರೇನು ಒಂದು ನಿರ್ದಿಷ್ಟ ಸಮುದಾಯವನ್ನು ರಕ್ಷಿಸುವ ಉಸ್ತುವಾರಿ ಸಚಿವರೇ? ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲಿದೆ. ದೆಹಲಿಯಲ್ಲಿ, ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಜನರು ನನ್ನನ್ನು ಕೇಳುತ್ತಾರೆ, ಇದಕ್ಕೆ ಉತ್ತರ ನೀಡಲಾಗದೆ ನಾವು ಮೂಕವಿಸ್ಮಿತರಾಗಿದ್ದೇವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ, ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಜನರಿಗೆ ಗ್ಯಾರಂಟಿ ನೀಡಿದೆ, ಆದರೆ, ಅವರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ. 2013 ರಲ್ಲಿ, ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡರು. 800 ರೌಡಿಗಳನ್ನು ಬಿಡುಗಡೆ ಮಾಡಿದರು. ಈ ರೌಡಿಗಳು ನಮ್ಮ ಹಿಂದೂ ಕಾರ್ಯಕರ್ತರನ್ನು ಕೊಂದರು. ರಾಜ್ಯ ಸಚಿವ ಸಂಪುಟವು ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು ಸುಟ್ಟುಹಾಕಿದವರ 46 ಪ್ರಕರಣಗಳನ್ನು ಹಿಂತೆಗೆದುಕೊಂಡಿತು. ಇದರಿಂದ ಕ್ರಿಮಿನಲ್ ಹಿನ್ನೆಲೆಯ 1,500 ಜನರು ಬಿಡುಗಡೆಯಾಗುತ್ತಿದ್ದರು. ಆದರೆ ಹೈಕೋರ್ಟ್ ಅದನ್ನು ತಡೆಹಿಡಿಯಿತು ಎಂದು ಹೇಳಿದರು.

ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಸಹಾಯ ಮಾಡಲು ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ, ಬೆಂಗಳೂರಿನ ಸಂಚಾರ ಸಮಸ್ಯೆಗಳನ್ನು ಸರಿಪಡಿಸಲು ಯಾವುದೇ ಪ್ರಯತ್ನಗಳು ನಡೆಸದಿರುವುದು ಬೇಸರ ತಂದಿದೆ. ಮೆಟ್ರೋ ಭೂಗತ ಮಾರ್ಗವಾಗಬೇಕಿತ್ತು. ಆದರೆ, ಅದು ಆಗಲಿಲ್ಲ. ಕಸದ ಸೆಸ್ ಸಂಗ್ರಹಿಸಲಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಕೇವಲ ಕಾಗದದಲ್ಲಿದೆ ಎಂದು ಕಿಡಿಕಾರಿದರು.

ಇದೇ ವೇಳೆ ದಕ್ಷಿಣ ಕನ್ನಡದ ಜನರು ಗ್ಯಾರಂಟಿಗಳನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಕಾಂಗ್ರೆಸ್ಗೆ ಮತ ಹಾಕುವಲ್ಲಿ ಇಲ್ಲ ಎಂಬ ಶಿವಕುಮಾರ್ ಅವರ ಹೇಳಿಕೆಯನ್ನು ಟೀಕಿಸಿದ ಅವರು, ಕಾಂಗ್ರೆಸ್ ಮತದಾರರಿಗೆ ಮಾತ್ರ ಭರವಸೆ ನೀಡುವುದಾಗಿ ಕಾಂಗ್ರೆಸ್ ಘೋಷಿಸಬೇಕಿತ್ತು. ಪ್ರತ್ಯೇಕತಾವಾದದ ಧ್ವನಿಗಳು ಕೇಳಿಬರುತ್ತಿರುವ ಸಮಯದಲ್ಲಿ, ಶಿವಕುಮಾರ್ ಅವರ ಹೇಳಿಕೆ ಅನಗತ್ಯ ಎಂದು ಹೇಳಿದರು.

Leave a Reply

Your email address will not be published. Required fields are marked *