ತುಮಕೂರು:- ಪುರಾಣ ಪ್ರಸಿದ್ಧ ಗೂಳೂರು ಗಣೇಶನ ಪೂಜೆಗೆ ಗಣೇಶನ ಮೂರ್ತಿ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.
ಈಗಾಗಲೇ ಅರ್ಧದಷ್ಟು ತಯಾರಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಗೂಳೂರು ಗ್ರಾಮದಲ್ಲಿ ಗಣೇಶನ ಹಬ್ಬದ ಸಂಭ್ರಮ ಆರಂಭವಾಗಿದೆ.
ಅರ್ಧದಷ್ಟು ಮೂರ್ತಿ ತಯಾರಿಕಾ ಕಾರ್ಯ ಮುಗಿದು ದೀಪಾವಳಿ ಹಬ್ಬಕ್ಕೆ ಮೂರ್ತಿ ಪೂಜೆಗೆ ಸಿದ್ಧವಾಗಲಿದೆ.
ಹೌದು, ಗಣೇಶ ಚತುರ್ಥಿಯ ದಿನ
ಎಲ್ಲಾ ಕಡೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಗೂಳೂರಿನಲ್ಲಿ ಮಾತ್ರ ಗಣೇಶನ ಹಬ್ಬದ ದಿನ ಗಣಪತಿ ತಯಾರಿಕೆ ಕಾರ್ಯವನ್ನು ಆರಂಭ ಮಾಡುತ್ತಾರೆ. ದೀಪಾವಳಿ ಹಬ್ಬದ ದಿನ ಇಲ್ಲಿನ ಗಣೇಶ ಪ್ರಥಮ ಪೂಜೆಗೆ ಸಿದ್ಧವಾಗುತ್ತಾನೆ.
ಗೂಳೂರು ಕೆರೆಗೆ ಮಣ್ಣನ್ನು ತರುವ ಗ್ರಾಮಸ್ಥರು:- ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಸಹ ಗಣೇಶನ ಹಬ್ಬದ ದಿನ ಇಡೀ ಗ್ರಾಮದ ಜನಾಂಗವೆಲ್ಲಾ ಒಟ್ಟಾಗಿ ಸೇರಿಕೊಂಡು ಗ್ರಾಮದ ಗೂಳೂರು ಕೆರೆಗೆ ತೆರಳಿ
ಚಿಕ್ಕಗಣಪತಿ ಮೂರ್ತಿಯನ್ನು ಪೂಜಿಸಿ ಅದನ್ನು ತಂದು ಗೂಳೂರು ಗಣೇಶನ ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. ದೊಡ್ಡ ಗಣಪತಿ ತಯಾರಿಕೆಗೆ ಅಗತ್ಯವಾದ ಕೆರೆ ಮಣ್ಣನ್ನು ಮೂಡ ಅಂದೇ ತಂದು ದೇವಾಲಯದ ಅಂಗಳಕ್ಕೆ ಇಡುತ್ತಾರೆ. ಅಂದಿನಿಂದಲೇ ದೊಡ್ಡ ಗಣಪತಿಯ ತಯಾರಿಕೆ ಕಾರ್ಯ ಪ್ರಾರಂಭವಾಗುತ್ತದೆ. ಪ್ರತಿ ವರ್ಷದ ಸಂಪ್ರದಾಯದಂತೆಯೇ ಈ ವರ್ಷವೂ ಸಹ ತಮ್ಮ ಪದ್ಧತಿಯಂತೆಯೇ ಇಂದಿನ ವರ್ಷವೂ ಗಣಪತಿ ಮೂರ್ತಿ ತಯಾರಿಕೆ ಕಾರ್ಯ ನಡೆಯುತ್ತಿದೆ.
ಮತ್ತೊಂದು ಕುತೂಹಲ ಸಂಗತಿಯೆಂದರೆ ವಿಜಯದಶಮಿ ದಿನ ಊರಿನ ಗ್ರಾಮಸ್ಥರಿಂದ ಪ್ರತಿ ದಿನ ಪೂಜಿಸುವ ಚಿಕ್ಕಗಣಪತಿ ಮೂರ್ತಿಯನ್ನು ದೊಡ್ಡ ಗಣೇಶನ ಉದರದೊಳಕ್ಕೆ ಇಟ್ಟು, ಗಣಪನಿಗೆ ಪ್ರಿಯವಾದ ಭಕ್ಷ್ಯಗಳನ್ನು ಸಹ ಹೊಟ್ಟೆಗೆ ಹಾಕಿ ಗಣೇಶನನ್ನು ನಿರ್ಮಿಸಲಾಗುತ್ತದೆ. ಎಲ್ಲೆಡೆ ದೀಪಾವಳಿಯ ಪಟಾಕಿ ಸದ್ದು ಮೊಳಗುವ ಸಮಯದಲ್ಲಿ ಈ ಗೂಳೂರು ಗಣೇಶನಿಗೆ ಪ್ರಥಮಪೂಜೆ ನಡೆಯುತ್ತದೆ. ಈ ಗಣಪತಿಗೆ ವಜ್ರಖಚಿತವಾದ ಕಿರೀಟ, ಬೆಳ್ಳಿ ಪಾದುಕೆ, ದಂತ ಕವಚಗಳನ್ನು ಧರಿಸಲಾಗುತ್ತದೆ.
ದೀಪಾವಳಿ ಹಬ್ಬದಂದು ಭಕ್ತರ ದರ್ಶನಕ್ಕೆ ಅವಕಾಶ:- ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ಮೂರ್ತಿಯನ್ನು ಬಲಿಪಾಡ್ಯಮಿಯಂದು ಅಂದರೆ ದೀಪಾವಳಿ ದಿನದಂದು ವಿವಿಧ ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯದೊಂದಿಗೆ ಪ್ರತಿಷ್ಠಾಪಿಸಿ, ಒಂದು ತಿಂಗಳ ಕಾಲ ಭಕ್ತರ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸರಿಸುಮಾರು ಒಂದು ತಿಂಗಳ ಕಾಲ ಈ ಬೃಹತ್ ಮಹಾಗಣಪತಿಗೆ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ. ಪ್ರತಿ ವರ್ಷದಂತೆ ಈ
ವರ್ಷವೂ ಬಲಿಪಾಡ್ಯಮಿ ದಿನದಂದು ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಕಣ್ಣು ಧರಿಸಲಾಗುತ್ತದೆ. ಅಂದಿನಿಂದ ಒಂದು ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.