ತುಮಕೂರು: ವಿಜಯವಾಡ ಮಹಾನಗರದ ಮಧ್ಯಭಾಗದಲ್ಲಿರುವ ಭವಾನಿ ನಗರ ಹಾಗೂ ಸುತ್ತಮುತ್ತಲಿನ ಜಲಾವೃತ ಪ್ರದೇಶಗಳಲ್ಲಿನ ಸುಮಾರು 2000 ಸಂತ್ರಸ್ತರುಗಳಿಗೆ ಪರಿಹಾರ ಸಾಮಗ್ರಿಗಳನ್ನು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಹರಾಜ್ ನೇತೃತ್ವದ ತಂಡ ವಿತರಿಸಿತು.
ಅಕ್ಟೋಬರ್ 15ರಂದು ಆಂಧ್ರಪ್ರದೇಶ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಹಾಗೂ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರಾದ ಸತ್ಯಕುಮಾರ್ ಯಾದವ್ ಅವರು ಸಾಮಾಗ್ರಿ ವಿತರಣೆಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎನ್.ಟಿ.ಆರ್. ಜಿಲ್ಲೆಯ ಬಿ.ಜೆ.ಪಿ. ಅಧ್ಯಕ್ಷರಾದ ಶ್ರೀ ರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ||ಎಂ.ವೆಂಕಟೇಶ್ವರಲು, ರಿಜಿಸ್ಟ್ರಾರ್ ನಾಹಿದಾ ಜಮ್ ಜಮ್, ಹಿರಿಯ ಪತ್ರಕರ್ತರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ಸದಸ್ಯರಾಗಿರುವ ಎಸ್.ನಾಗಣ್ಣ, ಕೈಗಾರಿಕೋದ್ಯಮಿಗಳಾದ ಹೆಚ್.ಜಿ.ಚಂದ್ರಶೇಖರ್, ಜಿಲ್ಲಾ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಆರ್.ಎಲ್.ರಮೇಶ್ ಬಾಬು ಮತ್ತು ತುಮಕೂರು ಶ್ರೀಶಿರಡಿ ಸಾಯಿ ಮಂದಿರ ಟ್ರಸ್ಟ್ ನ ನಟರಾಜ್ ಶೆಟ್ಟಿ ಹಾಗೂ ಇನ್ಫೋಸಿಸ್ ಫೌಂಡೇಷನ್ ಪರವಾಗಿ ಬಿ.ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಮಾನ್ಯ ಕುಲಪತಿಗಳು ತಮ್ಮ ಭಾಷಣದಲ್ಲಿ ಸ್ವಾಮಿ ಜಪಾನಂದಜೀ ರವರ ಸೇವಾ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿ ಆರು ರಾಜ್ಯಗಳಲ್ಲಿ ಪ್ರಕೃತಿ ವಿಕೋಪ ಉಂಟಾದಾಗಲೆಲ್ಲ ಸ್ವಾಮೀಜಿಯವರು ಧಾವಿಸುತ್ತಿರುವುದು ನಿಜಕ್ಕೂ ಅದ್ಭುತವಾದ ವಿಚಾರವೇ ಸರಿ. ತಾವು ಮತ್ತು ತಮ್ಮ ತಂಡ ಈ ಯೋಜನೆಗಳನ್ನು ಸ್ವತಃ ಕಂಡು ಭಾಗವಹಿಸುವ ಸಲುವಾಗಿ ತಾವೆಲ್ಲರೂ ಬಂದಿರುವುದಾಗಿ ತೆಲುಗು ಭಾಷೆಯಲ್ಲೇ ಭಾಷಣವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ತದನಂತರ ಮಾತನಾಡಿದ ಮಂತ್ರಿ ಶ್ರೀ ಸತ್ಯಕುಮಾರ್ ಯಾದವ್, ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರ ಸೇವಾ ಯೋಜನೆಗಳನ್ನು ಹಾಗೂ ತಾವು ಪ್ರತಿನಿಧಿಸುತ್ತಿರುವ ಧರ್ಮಾವರಂ ಕ್ಷೇತ್ರದಿಂದ ಬಹಳ ದಿನಗಳಿಂದ ಗಮನಿಸುತ್ತಿರುವುದಾಗಿ ತಿಳಿಸಿದ ಅವರು ಪೂಜ್ಯರ ಹೃದಯವಂತಿಕೆ ಹಾಗೂ ಸ್ವಾಮಿ ವಿವೇಕಾನಂದರ ಭೋಧನೆಗಳನ್ನು ಅನುಷ್ಠಾನರೂಪಕ್ಕೆ ತರುತ್ತಿರುವ ಒಬ್ಬ ವಿಶಿಷ್ಟ ಸಂನ್ಯಾಸಿ ಎಂದು ನೆರೆದ ಸಹಸ್ರಾರು ಜನರಿಗೆ ಸ್ವಾಮೀಜಿಯವರ ಕಾರ್ಯವೈಖರಿಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿರವರು ತಮ್ಮ ಕ್ಷೇತ್ರವಾದ ಧರ್ಮಾವರಂನಲ್ಲಿಯೂ ಸಹ ಕೆಲವು ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಈ ಯೋಜನೆಗಳಿಗೆ ತಮ್ಮ ಸರ್ಕಾರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು. ದೂರದ ಪಾವಗಡದಿಂದ ವಿಜಯವಾಡಕ್ಕೆ ಬಂದು ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಒಂದು ಪುಣ್ಯ ಎಂದು ಬಣ್ಣಿಸಿದರು.
ಕಾರ್ಯಕ್ರಮದ ನಂತರ ನೆರೆದ ಎರಡು ಸಾವಿರ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ವಿಜಯವಾಡದ ಮಧ್ಯಭಾಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಸುಮಾರು 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಸರ್ಕಾರದ ಅಧಿಕಾರಿಗಳು ಇದ್ದು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದ್ದು ಇವರಿಗೆ ಸ್ವಾಮಿ ವಿವೇಕಾನಂದ ತಂಡ ಹಾಗೂ ಸ್ಥಳೀಯ ಬಿಜೆಪಿ ಮತ್ತು ಭಜರಂಗ ತಂಡದ ನಾಯಕರುಗಳು ಅತ್ಯಂತ ಶಿಸ್ತುಬದ್ದವಾಗಿ, ಸಮರ್ಪಕವಾಗಿ ಕಾರ್ಯನಿರ್ವಹಿಸಿದರು.
ಈ ಪರಿಹಾರ ಕಾರ್ಯದೊಂದಿಗೆ ವಿಜಯವಾಡ ಹಾಗೂ ಸುತ್ತಮುತ್ತಲಿನ ಸುಮಾರು 4000 ಸಂತ್ರಸ್ತರಿಗೆ ಸಹಾಯಹಸ್ತವನ್ನು ನೀಡಿದಂತಾಯಿತು. ಈ ಮಹಾನ್ ಯೋಜನೆಗೆ ಸಹಕಾರ ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ಅವರಿಗೆ ಮಂತ್ರಿಗಳಾದಿಯಾಗಿ ಎಲ್ಲರೂ ಪ್ರಶಂಸೆಯನ್ನು ವ್ಯಕ್ತಪಡಿಸಿದರು.