ತುಮಕೂರು : ನವೆಂಬರ್ 5 ರಂದು ವಕೀಲರು ನಗರದ ಸಿಪಿಐ ದಿನೇಶ್ ಕುಮಾರ್ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯ ಸುದ್ದಿಯನ್ನು ಮಾಡಲು ತೆರಳಿದ್ದ ಈ ಸಂಜೆ ದಿನಪತ್ರಿಕೆಯ ಜಿಲ್ಲಾ ವರದಿಗಾರ ರಮೇಶ್ ರವರ ಮೇಲೆ ಕೆಲ ವಕೀಲರು ತಳ್ಳಾಟ ನಡೆಸಿದ್ದರು ಎಂದು ಆರೋಪಿಸಿ ಪತ್ರಕರ್ತ ರಮೇಶ್ ರವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೂರು ನೀಡಿದ್ದರು.
ಇಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ಮತ್ತು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರುರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿರವರು ಆಗಮಿಸಿ ದೂರುದಾರ ರಮೇಶ್ ರವರ ವಿಷಯದಲ್ಲಿ ವಿಷಾಧ ವ್ಯಕ್ತಪಡಿಸಿ ರಾಜಿ ಸಂಧಾನ ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.
ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರುರವರು ಮಾತನಾಡಿ, ಪತ್ರಕರ್ತರು ಮತ್ತು ವಕೀಲರು ಈ ಸಮಾಜವನ್ನು ಕಟ್ಟಬೇಕಾದವರು ಈ ಘಟನೆ ನಡೆಯಬಾರದಿತ್ತು ನಡೆದಿದೆ, ಸುದ್ದಿ ಮಾಡಲು ಹೋದಾಗ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ ಆದರೆ ವೈಯಕ್ತಿಕವಾಗಿ ಯಾರೂ ಸಹ ಪತ್ರಕರ್ತರ ಮೇಲೆ ಕೈ ಮಾಡುವುದಾಗಲೀ, ಹಲ್ಲೆ ಮಾಡುವುದಾಗಲೀ ಮಾಡಬಾರದು ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ರವರು ಮಾತನಾಡಿ, ವಕೀಲರು ಮತ್ತು ಪತ್ರಕರ್ತರು ಒಂದೇ ನಾಣ್ಯದ ಎರಡು ಮುಖಗಳು ಯಾರು ಕೂಡ ಪತ್ರಕರ್ತರ ಮೇಲೆ ಹಲ್ಲೆ ಮಾಡಬಾರದು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಮಾತನಾಡಿ, ಪ್ರತಿಭಟನೆ ನಡೆಸುವಾಗ ಯಾರೂ ಸಹ ವೈಯಕ್ತಿಕವಾಗಿ ಪತ್ರಕರ್ತರನ್ನು ನೂಕಾಡಿಲ್ಲ, ಹಲ್ಲೆ ಮಾಡಿಲ್ಲ ಅಚಾನಕ್ ಆಗಿ ತೆಳ್ಳಾಟ ನೂಕಾಟ ನಡೆದಿದೆ. ಈ ವಿಚಾರಕ್ಕೆ ನಮ್ಮ ಜಿಲ್ಲಾ ವಕೀಲರ ಸಂಘವು ತೀವ್ರ ವಿಷಾಧ ವ್ಯಕ್ತಪಡಿಸುತ್ತದೆ. ಮುಂದೆ ವಕೀಲರು ಮತ್ತು ಪತ್ರಕರ್ತರು ಅಣ್ಣತಮ್ಮಂದಿರಂತೆ ಬಾಳೋಣ ಈ ಕಹಿ ಘಟನೆಯನ್ನು ಪತ್ರಕರ್ತರು ಮರೆತು ನಮ್ಮೊಂದಿಗೆ ಸಮಾಜ ಕಟ್ಟಲು ಹೆಜ್ಜೆ ಹಾಕಿ ಎಂದು ವಿನಂತಿಸಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿರವರು ಮಾತನಾಡಿ, ವಕೀಲರು ಮತ್ತು ಪತ್ರಕರ್ತರು ಸಮಾಜ ನಿರ್ಮಾಣದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತೇವೆ, ಬಡವರು, ನೊಂದವರ ಪರ ನಾವುಗಳು ನಿಲ್ಲಬೇಕು ಈ ಘಟನೆ ನಡೆಯಬಾರದಿತ್ತು ನಡೆದಿದೆ ಅದಕ್ಕಾಗಿ ವಕೀಲರ ಸಂಘವು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಈ ಕಹಿ ಘಟನೆಯನ್ನು ಇಲ್ಲಿಯೇ ಇಂದಿಗೆ ಮರೆತು ಬಿಡಿ ನಾವೆಲ್ಲರೂ ಉತ್ತಮ ಸಮಾಜಕ್ಕಾಗಿ ಕೈಜೋಡಿಸಿ ಒಂದಾಗಿ ನಡೆಯೋಣ ಎಂದು ವಿನಂತಿಸಿದರು.
ನಂತರ ದೂರದಾರ ರಮೇಶ್ ಮತ್ತು ವಕೀಲರ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಪರಸ್ಪರ ಹಸ್ತಲಾಘವ ಮಾಡಿ ದೂರನ್ನು ಮುಕ್ತಾಯಗೊಳಿಸಿದರು.