ಬೇತಮಂಗಲ: ಮಕ್ಕಳು ದೇಶದ ಭವಿಷ್ಯ. ಅದಕ್ಕೆ ಸುಭದ್ರ ಅಡಿಪಾಯ ಹಾಕುವುದು ಶಿಕ್ಷಣ. ಅಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಸರ್ಕಾರದ ಕರ್ತವ್ಯ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ ಕಾಲೇಜುಗಳೇ ಆಸರೆಯಾಗಿದೆ. ಆದರೆ ಅಂತಹ ಸರ್ಕಾರಿ ಶಾಲೆಗಳೇ ಈಗ ಮಕ್ಕಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರೊ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನಲ್ಲಿ ವರದಿಯಾಗಿದೆ.
ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿಯ ನಾಗಲೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯೊಂದು ಶಿಕ್ಷಕರ ಕೊರತೆಯಿಂದ ಬಾಗಿಲು ಮುಚ್ಚಿ ಒಂದೂವರೆ ದಶಕವೇ ಕಳೆದಿದೆ. ಕಳೆದ ಹದಿನೈದು ವರ್ಷಗಳಿಂದ ಈ ಶಾಲೆಗೆ ಶಿಕ್ಷಕರನ್ನು ನೇಮಿಸದೇ ಇರುವುದು ಸರ್ಕಾರದ ಉಡಾಫೆಗೆ ಸಾಕ್ಷಿಯಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡವಿದ್ದರೂ ಶಿಕ್ಷಕರನ್ನು ನೇಮಿಸದೆ, ಇದೀಗ ಪಾಳು ಬಂಗಲೆಯಾಗಿದೆ.
ಸರ್ಕಾರಿ ಶಾಲೆಯ ಕಟ್ಟಡವನ್ನು ದುರಸ್ಥಿಗೊಳಿಸಿ ಅಲ್ಲಿಗೆ ಶಿಕ್ಷಕರನ್ನು ನೇಮಿಸಿ ಮಕ್ಕಳ ಭವಿಷ್ಯವನ್ನು ರೂಪಿಸುವ ಬಗ್ಗೆ ತೀರ ಅಸಡ್ಡೆ ತೋರುತ್ತಿದ್ದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ.
ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ, ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟರೂ ಸಹ ಶಿಕ್ಷಣ ಇಲಾಖೆಗಳು ಮಾತ್ರ ಆ ಹಣವನ್ನು ಇಂತಹ ಶಾಲೆಗಳಿಗೆ ಖರ್ಚು ಮಾಡುತ್ತಿಲ್ಲ ಅನ್ನೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟರೂ ಸಹ ಶಿಕ್ಷಣ ಇಲಾಖೆ ಯಾಕೆ ಶಿಕ್ಷಕರನ್ನು ನೇಮಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದ್ದು ದೂರದೂರುಗಳಿಗೆ ವಿದ್ಯಾಭ್ಯಾಸಕ್ಕಾಗಿ ನಡೆದುಕೊಂಡು ಹೋಗುತ್ತಾರೆ ಈ ವೇಳೆ ಮಕ್ಕಳಿಗೆ ಸಮಸ್ಯೆ ಉಂಟಾದರೆ ಅದಕ್ಕೆ ಶಿಕ್ಷಣ ಇಲಾಖೆ ನೇರ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಚಾರದ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಶಾಲೆಯ ಸ್ಥಿತಿ ಗಮನಿಸಿದ ಜೈಭೀಮ್ ಶ್ರೀನಿವಾಸ್, ಶಿಕ್ಷಣಾಧಿಕಾರಿಗಳಿಗೆ ಪತ್ರಿಕಾ ಹೇಳಿಕೆಯ ಮೂಲಕ ಶಿಕ್ಷಕರನ್ನು ನೇಮಿಸಿ ಶಾಲೆಯನ್ನು ಆರಂಭಿಸಬೇಕೆAದು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.
ಶಾಲಾ ಕಟ್ಟಡದ ಮುಂಬಾಗ ಮುಖಂಡರು ಹಾಗೂ ಮಕ್ಕಳ ಜೊತೆಗೆ ಚರ್ಚೆ ಮಾಡಿ ಇನ್ಮುಂದೆ ಶಾಲೆ ಪ್ರಾರಂಭವಾಗುತ್ತದೆ ಚೆನ್ನಾಗಿ ಓದಬೇಕು ಎಂದು ಮಕ್ಕಳಿಗೆ ಬುದ್ಧಿಮಾತು ಹೇಳಿದ ಮಕ್ಕಳೊಟ್ಟಿಗೆ ಪ್ರತಿಭಟನೆ ನಡೆಸಿದರು.
ಶಿಕ್ಷಣ ಇಲಾಖೆಯು ಈ ಕೂಡಲೇ ಶಾಲೆಯನ್ನು ಪುನರಾರಂಭಿಸಿ ಮಕ್ಕಳ ಭವಿಷ್ಯವನ್ನು ರೂಪಿಸಿ. ಇನ್ನೊಂದು ವಾರದಲ್ಲಿ ಶಾಲೆಗೆ ಶಿಕ್ಷಕರನ್ನು ನೇಮಿಸದೇ ಹೋದರೆ ನಮ್ಮ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ, ಎವೈವಿಕೆ ಜಿಲ್ಲಾ ಅಧ್ಯಕ್ಷ ಗೋವಿಂದಪ್ಪ, ತಾಲೂಕು ಅಧ್ಯಕ್ಷ ಕಣ್ಣೂರು ರಾಜೇಶ್, ಬೇತಮಂಗಲ ಹೋಬಳಿ ಅಧ್ಯಕ್ಷ ಸಂಜು ಹಾಗೂ ಅನೇಕ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.