5 ಸಾವಿರ ಕೋಟಿ ರೂ. ಹೂಡಿಕೆಯ 1 ಸಾವಿರ ಮೆಗಾವ್ಯಾಟ್ ಮರುಬಳಕೆ Power generation ಯೋಜನೆ

5 ಸಾವಿರ ಕೋಟಿ ರೂ. ಹೂಡಿಕೆಯ 1 ಸಾವಿರ ಮೆಗಾವ್ಯಾಟ್ ಮರುಬಳಕೆ Power generation ಯೋಜನೆ

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಭಾರತೀಯ ಅನಿಲ ಪ್ರಾಧಿಕಾರವು (ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್- ಜಿಎಐಎಲ್) ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 5,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 1,000 ಮೆಗಾವಾಟ್ (1 ಗಿಗಾವಾಟ್) ಉತ್ಪಾದನಾ ಸಾಮರ್ಥ್ಯದ ಮರುಬಳಕೆ ಇಂಧನ ಸ್ಥಾವರಗಳನ್ನು ಆರಂಭಿಸುವ ಒಡಂಬಡಿಕೆಗೆ ಶುಕ್ರವಾರ ಅಂಕಿತ ಹಾಕಲಾಯಿತು.

ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಇಂಧನ ಸಚಿವ ಕೆ ಜೆ ಜಾರ್ಜ್, ಕ್ರೆಡಲ್ ಅಧ್ಯಕ್ಷ ಟಿ ಡಿ ರಾಜೇಗೌಡ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಜಿಐಎಎಲ್ ಕಾರ್ಯಕಾರಿ  ನಿರ್ದೇಶಕ ಪರಿವೇಶ್ ಛುಗ್ ಸಿಂಗ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲರು, ಅನಿಲ ಪ್ರಾಧಿಕಾರವು ರೈತರಿಂದ ಜಮೀನನ್ನು ಭೋಗ್ಯಕ್ಕೆ ಪಡೆದುಕೊಂಡು ಯೋಜನೆ ಆರಂಭಿಸಬಹುದು. ಅಥವಾ ಕೆಐಎಡಿಬಿ ಮೂಲಕ ಬೇಕಾದರೂ ಅಗತ್ಯ ಜಮೀನು ಒದಗಿಸಲಾಗುವುದು.

ಈ ಯೋಜನೆಗೆ ಅಗತ್ಯವಿರುವ ಭೂಮಿ, ಅನುಮತಿ, ಇತ್ಯಾದಿಗಳನ್ನು ತ್ವರಿತವಾಗಿ ಒದಗಿಸಲಾಗುವುದು.  ಎಂದು ಭರವಸೆ ನೀಡಿದರು.

ಮರುಬಳಕೆ ಇಂಧನ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆ ಆಗುವಂತೆ ನಾವು ನೋಡಿಕೊಳ್ಳಲಿದ್ದೇವೆ. ಇದು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕವಾಗಿದೆ. ನಮ್ಮಲ್ಲಿರುವ ಕಾರ್ಯ ಪರಿಸರ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಮತ್ತು ಭೂಮಿಯ ಲಭ್ಯತೆಗಳಿಂದಾಗಿ ಪರಿಸರಸ್ನೇಹಿ ಇಂಧನ ಕ್ಚೇತ್ರದ ಹೂಡಿಕೆಗೆ ಕರ್ನಾಟಕವು ಪ್ರಶಸ್ತ ತಾಣವಾಗಿದೆ ಎಂದು ಅವರು ಒತ್ತಿ ನುಡಿದಿದ್ದಾರೆ.

ಇಂಧನ ಸಚಿವ ಕೆ ಜೆ ಜಾರ್ಜ್ ಮಾತನಾಡಿ, ಅನಿಲ ಪ್ರಾಧಿಕಾರವು ರಾಜ್ಯ ಸರ್ಕಾರದ ಜತೆ ಈ ಮಹತ್ವದ ಒಡಂಬಡಿಕೆ ಮಾಡಿಕೊಂಡಿರುವುದು ಭಾರತದ ಪರಿಸರಸ್ನೇಹಿ ಇಂಧನ ವಲಯದ ಸಾಧನೆಗೆ ಮತ್ತಷ್ಟು ಬಲ ತಂದುಕೊಡಲಿದೆ. ಪಾವಗಡದಲ್ಲಿರುವ ಸೋಲಾರ್ ಪಾರ್ಕಿನಲ್ಲಿ ವರ್ಷಕ್ಕೆ 2,050 ಮೆಗಾವಾಟ್ ಸೌರ ಮತ್ತು ಪವನ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಲ್ಲಿನ ರೈತರು ಈ ಯೋಜನೆಗೆ ಇನ್ನೂ 10 ಸಾವಿರ ಎಕರೆ ಭೂಮಿ ಬಿಟ್ಟುಕೊಡಲು ಮುಂದೆ ಬಂದ ಮೇಲೆ ಈ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯದಲ್ಲಿ ಇದರಿಂದ ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಎರಡೂ ಈಡೇರಲಿದೆ ಎಂದರು.

ಇದು ಜಿಐಎಲ್ (ಗೈಲ್) ಜತೆಗಿನ ರಾಜ್ಯ ಸರ್ಕಾರದ ದೀರ್ಘಕಾಲೀನ ಬಾಂಧವ್ಯದ ಆರಂಭವಾಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಗುರಿಗಳನ್ನು ಸಾಧಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ, ಗೇಲ್ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ) ಸುಮಿತ್ ಕಿಶೋರ, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *