ತುಮಕೂರು :- ಸೋಮವಾರ ಮತ್ತು ಮಂಗಳವಾರ ಸುರಿದ ಮಳೆಯಿಂದಾಗಿ ಕೆರೆಗಳು ತುಂಬಿ ಹರಿಯುತ್ತಿದ್ದು, ರಭಸವಾಗಿ ಹರಿಯುವ ನೀರಲ್ಲಿ ಮೀನಿಡಿಯುವ ಹುಚ್ಚಾಟಕ್ಕೆ ಜನ ಇಳಿದಿದ್ದಾರೆ.
ವ್ಯಾಪಕ ಮಳೆಗೆ ನಗರ ಕೇಂದ್ರ ಭಾಗದಲ್ಲಿರುವ
ತುಮಕೂರಿನ ಐತಿಹಾಸಿಕ ಅಮಾನಿಕೆರೆ ತುಂಬಿ ಕೋಡಿ ಬಿದ್ದಿದ್ದು, ಮೈದುಂಬಿ ಹರಿಯುತ್ತಿದೆ.
ಜಿಲ್ಲೆಯಲ್ಲಿ ಅನೇಕ ಕೆರೆಗಳು ತುಂಬಿ ಕೋಡಿ ಹರಿದಿದ್ದು ಒಂದೆಡೆಯಾದರೆ ಇತ್ತ ಅಮಾನಿಕೆರೆಯೂ ತುಂಬಿ ಹರಿಯುತ್ತಿದೆ. ಅಮಾನಿಕೆರೆ ತುಂಬುವುದೇ ಬಹಳ ವಿರಳ, ಕಳೆದ ವರ್ಷ ಹೆಚ್ಚು ಬರಗಾಲವಿದ್ದ ಪರಿಣಾಮ ಕೆರೆಗೆ ನೀರು ಬರಲಿಲ್ಲ. ಆದರೆ ಈ ವರ್ಷ ಬಂದ ಹಿಂಗಾರಿನ ಎರಡೇ ದಿನದ ಮಳೆಗೆ ಕೋಡಿ ಬಿದ್ದಿದೆ.
ಮೀನು ಹಿಡಿಯುವ ಸಂಭ್ರಮ ಕೋಡಿ ಬಿದ್ದು ರಭಸವಾಗಿ ಹರಿಯುತ್ತಿರುವ ಅಮಾನಿಕೆರೆ ಕೋಡಿಯಲ್ಲಿ ಯುವಕರು ಮೀನು ಹಿಡಿಯುವ ಹುಚ್ಚಾಟದ ಸಾಹಸ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಮೀನಿನ ಬಲೆ ಹಿಡಿದು ಮೀನಿಗಾಗಿ ರಭಸವಾಗಿ ಹರಿಯುವ ನೀರಲ್ಲೇ ಸೇತುವೆ ಕೆಳಗೆ ಸಾಹಸ ಮಾಡುತ್ತಿದ್ದಾರೆ. ಯಾವಾಗ ಬೇಕಾದರೂ ನೀರಿನ ರಭಸ ಹೆಚ್ಚಾಗಬಹುದು. ಇದ್ಯಾವುದನ್ನೂ ಲೆಕ್ಕಿಸದೇ ಮೀನು ಹಿಡಿಯುವುದಕ್ಕೆ ಮುಂದಾಗುತ್ತಿದ್ದಾರೆ.
ರಭಸವಾಗಿ ಹರಿಯುವ ನೀರಲ್ಲಿ ಸೆಲ್ಪಿ ಸಾಹಸ :- ಹರಿಯುವ ನೀರಲ್ಲಿ ನಿಂತು ಸೆಲ್ಪಿ ತೆಗೆದುಕೊಳ್ಳುವುದು, ವಿಡಿಯೋ ಮಾಡಿಕೊಳ್ಳುವ ಹುಚ್ಚಾಟವನ್ನು ಯುವಕರು ಮಾಡುತ್ತಿದ್ದಾರೆ. ನಾಲ್ಕೈದು ಯುವಕರ ತಂಡ ಕೋಡಿ ಹಿಂಭಾಗಕ್ಕೆ ತೆರಳಿ ನೀರು ಇಳಿಯುವ ಜಾಗದಲ್ಲೇ ನಿಂತು ಸೆಲ್ಪಿ ಹುಚ್ಚಾಟ ಮೆರೆಯುತ್ತಿದ್ದಾರೆ. ಜೀವದ ಹಂಗನ್ನೂ ತೊರೆದು ಝಳು ಝುಳು ಹರಿಯುವ ನೀರಿನ ದೃಶ್ಯಕ್ಕೆ ಮನಸೋತು ಆ ದೃಶ್ಯವನ್ನು ವಿಡಿಯೋ, ಸೆಲ್ಪಿ ಮಾಡಿಕೊಳ್ಳುವ ಮೂಲಕ ಆನಂದಿಸುವ ಸಾಹಸ ಮಾಡುತ್ತಿದ್ದಾರೆ.
ಎಲ್ಲಿದೆ ಜಿಲ್ಲಾಡಳಿತ:- ಮೈದುಂಬಿ ಹರಿಯುತ್ತಿರುವ ಅಮಾನಿಕೆರೆ ಕೋಡಿಯಲ್ಲಿ ಯುವಕರು ನೀರಿಗಿಳಿಯುತ್ತಿದ್ದು, ಮುಂದೆ ಸಂಭವಿಸಬಹುದಾದ ಅವಘಡಕ್ಕೂ ಮುನ್ನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಹೀಗಾಗಿ ಅಮಾನಿಕೆರೆ ಕೆರೆ ಕೋಡಿಯಲ್ಲಿ ಹರಿಯುತ್ತಿರುವ ನೀರಿಗೆ ಯಾರೂ ಇಳಿಯದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.