ಗಾಂಧೀಜಿಯವರ ಆದರ್ಶಗಳನ್ನು ವಿಶ್ವವೇ ಒಪ್ಪಿದೆ: ಗೃಹ ಸಚಿವ ಪರಮೇಶ್ವರ

ಕುತೂಹಲ ಮೂಡಿಸಿದ ಡಿನ್ನರ್ ಮೀಟಿಂಗ್ : ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

ತುಮಕೂರು :  ಅಹಿಂಸೆ ಮತ್ತು ಶಾಂತಿಯಿಂದ ಸ್ವಾತಂತ್ರ್ಯ ಗಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಮಹಾನಗರ ಪಾಲಿಕೆಯು ನಗರದ ಅಮಾನಿಕೆರೆ ಉದ್ಯಾನವನದಲ್ಲಿ ನಿರ್ಮಿಸಿರುವ ಗ್ಯಾರಮೂರ್ತಿ ಕಲಾಕೃತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುತೇಕ ಎಲ್ಲ ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳನ್ನು ಇಡಲಾಗಿದೆ. ಗಾಂಧೀಜಿಯವರ ಆದರ್ಶಗಳು ಆಫ್ರಿಕಾವನ್ನು ಸ್ವಾತಂತ್ರ್ಯಗೊಳಿಸಲು ನೆಲ್ಸನ್ ಮಂಡೇಲಾ ಅವರಿಗೆ ಪ್ರೇರಣೆಯಾಯಿತು. ವಿಶ್ವದ ಬಹುತೇಕ ದೇಶಗಳು ಗಾಂಧೀಜಿಯ ಆದರ್ಶಗಳನ್ನು ಒಪ್ಪಿ, ಅಳವಡಿಸಿಕೊಂಡಿದ್ದಾರೆ. ಗಾಂಧೀಜಿಯವರನ್ನು  ಪಡೆದ ನಾವೆಲ್ಲ ಸದೃಷ್ಟವಂತರು. ಅವರು ಒಂದು ಶಕ್ತಿ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕು ಎಂದು ಹೇಳಿದರು.

ಶಾಸ್ತ್ರೀಜಿ ಅವರ ಆದರ್ಶಗಳನ್ನು ಸಹ ನಾವೆಲ್ಲ ಪಾಲಿಸಬೇಕು. ಕಠಿಣ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಗಳಿಸಿದ್ದೇವೆ. ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಕೋಟ್ಯಂತರ ಜನ ಹೋರಾಡಿದರು. ಅವರು ದೇಶದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಪರಿಯನ್ನು ಇತಿಹಾಸ ಮರೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಸೋಮಣ್ಣ ಮತ್ತು ನಾನು ಬೇರೆ ಪಕ್ಷದಲ್ಲಿದರಬಹುದು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾವಿಬ್ಬರು ಒಟ್ಟಾಗಿದ್ದೇವೆ. ಈ ದಿನ ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರನ್ನು ಸ್ಮರಿಸುತ್ತೇನೆ. ಅಮಾನಿಕೆರೆ ಅಭಿವೃದ್ಧಿಗೆ 17 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಸಹಕರಿಸಿದರು ಎಂದು ಮೆಲುಕು ಹಾಕಿದರು.

ತುಮಕೂರಿನ ಎರಡು ಭಾಗದಲ್ಲಿ ಸ್ವಾಗತದ ದ್ವಾರಗಳನ್ನು ನಿರ್ಮಿಸಬೇಕಿದೆ. ಸಬ್ ಅರ್ಬನ್ ರೈಲು, ಮೆಟ್ರೋ ರೈಲು ಬರಲಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ವಸಂತಾನರಸಾಪುರದಲ್ಲಿ ನಿರ್ಮಾಣವಾಗುತ್ತಿದೆ. ವಸಂತನರಸಾಪುರದವರೆಗೂ ಮೆಟ್ರೋ ರೈಲು ಕೊಂಡೊಯ್ಯಲಾಗುವುದು. ಅನೇಕ ದೃಷ್ಟಿಯಿಂದ ತುಮಕೂರು ಜಿಲ್ಲೆಯನ್ನು ಬೆಳೆಸುವ ಕನಸನ್ನು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ತುಮಕೂರು ಬದಲಾಗುತ್ತಿದೆ ಎಂಬುದರ ಸಂಕೇತ ಗ್ಯಾರಮೂರ್ತಿ ನಿರ್ಮಾಣ. ತುಮಕೂರು ಜಿಲ್ಲೆ ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿದೆ ಎಂದು ಅನೇಕ ಸಲ ಮಾತನಾಡಿದ್ದೇವೆ. ಇದು ಸಾಕಾರಗೊಳ್ಳಬೇಕಾದರೆ ತುಮಕೂರು ವಿಶೇಷ ಎನ್ನುವಂತೆ ಬೆಳೆಯಬೇಕು ಎಂದು ಹೇಳಿದರು.

ಗ್ಯಾರಮೂರ್ತಿ ಕಲಾಕೃತಿ ನಿರ್ಮಿಸಿದ ಮಧುಗಿರಿಯ ದೇವರಾಜು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಅವರು ಇದ್ದರು.

Leave a Reply

Your email address will not be published. Required fields are marked *