ರಾಜ್ಯದಲ್ಲಿ 78 ಲಕ್ಷ ರೈತರು, 125 ಲಕ್ಷ ಕೃಷಿ ಕಾರ್ಮಿಕರಿದ್ದಾರೆ: ಸಚಿವ ಚಲುವನಾರಾಯಣಸ್ವಾಮಿ

ರಾಜ್ಯದಲ್ಲಿ 78 ಲಕ್ಷ ರೈತರು, 125 ಲಕ್ಷ ಕೃಷಿ ಕಾರ್ಮಿಕರಿದ್ದಾರೆ: ಸಚಿವ ಚಲುವನಾರಾಯಣಸ್ವಾಮಿ

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಮೂಲಕ ಕೃಷಿ ಸಮುದಾಯ ಹಾಗೂ ಜನಸಾಮಾನ್ಯರಿಗೆ ನಮ್ಮ ಸರ್ಕಾರ ನೆರವು ಒದಗಿಸಿದೆ. ಕೃಷಿ ಪದವೀಧರರು ಸ್ವಯಂ ಉದ್ಯೋಗ ಅಳವಡಿಸಿಕೊಂಡು ಇತರರಿಗೆ ಉದ್ಯೋಗ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಕೃಷಿ ಸಚಿವ ಚಲುವನಾರಾಯಣಸ್ವಾಮಿ ಕರೆ ನೀಡಿದರು.

ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯ ಕೇಂದ್ರ (ಜಿಕೆವಿಕೆ) ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿಮೇಳ-2024 ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.75ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. 60ರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿಯಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. 1964-64ರಲ್ಲಿ ಆಹಾರ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ 45.4 ಮಿಲಿಯನ್ ಟನ್ಗಳಷ್ಟಿದ್ದು, 2023-24ರ ಸಾಲಿನಲ್ಲಿ 332.22 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ. 2047ರ ವೇಳೆಗೆ 437 ಮಿಲಿಯನ್ ಟನ್ಗಳ ಆಹಾರ ಉತ್ಪಾದನೆ ಅವಶ್ಯವಿದೆ ಎಂದರು.

ಜಿಕೆವಿಕೆ ರಾಜ್ಯದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಕೃಷಿ ವಿಶ್ವವಿದ್ಯಾಲಯವಾಗಿದ್ದು, 60 ದಶಕಗಳಿಂದ ರಾಜ್ಯದ ರೈತರಿಗೆ ಕೃಷಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ರೈತರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಈ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದರ ಜೊತೆಗೆ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಕೃಷಿಯಿಂದ ವಿಮುಕ್ತರಾಗುತ್ತಿರುವ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಕೃಷಿ ಲಾಭದಾಯಕ ಕ್ಷೇತ್ರವೆಂದು ತೋರಿಸಲು ಕೃಷಿ ವಿವಿಗಳು ಮುಂದಾಗಬೇಕು. ದೇಶದ ಬಹುತೇಕ ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸದಾ ಹಸಿರು ಕ್ರಾಂತಿ ಅತ್ಯವಶ್ಯಕ. ಈ ಮೇಳವನ್ನು ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 78 ಲಕ್ಷಕ್ಕೂ ಹೆಚ್ಚು ರೈತರು ಹಾಗೂ 125 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ. ಕಳೆದ ಸಾಲಿನಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಸಬ್ಸಿಡಿಯೊಂದಿಗೆ ಯಂತ್ರೋಪಕರಣ, ನೀರಾವರಿ ಸಲಕರಣೆಗಳ ಖರೀದಿಗೆ ನೀಡಲಾಗಿತ್ತು. 2100 ಕೋಟಿ ರೂಪಾಯಿ ಬೆಳೆವಿಮೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ವಿತರಿಸಲಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ ರೂಪಿಸಿ ಅತ್ಯಧಿಕ ಆರ್ಥಿಕ ನೆರವಿನೊಂದಿಗೆ ಬೃಹತ್ ಬೆಳೆ ಕಟಾವು ಯಂತ್ರಗಳನ್ನು ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *