ಬೆಂಗಳೂರು – ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಅಗತ್ಯ ಮಾಹಿತಿ ನೀಡಲು ರಾಜ್ಯಸರ್ಕಾರದ ವಿರೋಧವಿಲ್ಲ. ಆದರೆ ಸಂಪುಟದ ಗಮನಕ್ಕೆ ಬಂದು ವರದಿ ನೀಡುವುದರಿಂದ ಹೊಣೆಗಾರಿಕೆ ಹೆಚ್ಚಿರುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಎಲ್ಲಾ ಪತ್ರಗಳಿಗೂ ಉತ್ತರ ಕೊಡಲು ನಮ ಸರ್ಕಾರ ಸಿದ್ಧವಿದೆ. ಆದರೆ ಅದು ಸಂಪುಟದ ಗಮನಕ್ಕೆ ಬರಬೇಕಿದೆ.ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಇಲಾಖೆಗಳಿಂದ ನೇರವಾಗಿ ಮಾಹಿತಿ ತೆಗೆದುಕೊಂಡು ಮುಖ್ಯಕಾರ್ಯದರ್ಶಿಯವರೇ ರಾಜ್ಯಪಾಲರಿಗೆ ವರದಿ ನೀಡಿರುವ ಉದಾಹರಣೆಗಳಿವೆ ಎಂದು ಹೇಳಿದರು.
ತೆರೆಮರೆಯಲ್ಲಿ ಯಾರೋ ಪತ್ರ ಬರೆಯುವುದು, ಯಾರೋ ಮಾಹಿತಿ ಪಡೆಯುವುದು ನಡೆಯುತ್ತಿದೆ. ಇದು ಸರಿಯಲ್ಲ. ಸಂಪುಟಕ್ಕೆ ಕಡತ ಮಂಡನೆಯಾದರೆ ಯಾವುದನ್ನು ರಾಜ್ಯಪಾಲರಿಗೆ ನೀಡಬೇಕು ಅಥವಾ ತಡೆಹಿಡಿಯಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಸಂಪುಟದ ಗಮನಕ್ಕೆ ತಂದಾಗ ಮುಖ್ಯ ಕಾರ್ಯದರ್ಶಿಯವರು ಹೊಣೆಗಾರರಾಗುವುದಿಲ್ಲ. ಸರ್ಕಾರವೇ ಉತ್ತರದಾಯಿತ್ವವಾಗಿರುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮುಡಾ ಪ್ರಕರಣದ ಕುರಿತು ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಡಳಿತ ಮಾಡುವವರು ಧರ್ಮ ಹಾಗೂ ನೈತಿಕತೆ ಪಾಲನೆ ಮಾಡಬೇಕು. ಇಲ್ಲವಾದರೆ ರಾವಣ ರಾಜ್ಯ ನಿರ್ಮಾಣವಾಗುತ್ತದೆ ಎಂದು ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಆಡಳಿತ ಮಾಡುವವರಷ್ಟೇ ಅಲ್ಲ, ಎಲ್ಲರೂ ಧರ್ಮಪಾಲನೆ ಮಾಡಬೇಕು ಎಂದರು.
ಕಾನೂನು ಮಾಡುವವರಿಗೆ ಒಂದು ಧರ್ಮ, ನ್ಯಾಯಾಧೀಶರುಗಳಿಗೆ ಒಂದು ಧರ್ಮ ಎಂದು ಇರುವುದಿಲ್ಲ. ಎಲ್ಲರೂ ಧರ್ಮಪಾಲನೆ ಮಾಡಿದಾಗ ರಾಮರಾಜ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ನಾಯಕ. ಕೆ.ಬಿ.ಕೋಳಿವಾಡ ವೈಯಕ್ತಿಕವಾದ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ನಲ್ಲಿ ಅವರು ಯಾವುದೇ ಸ್ಥಾನಮಾನ ಹೊಂದಿಲ್ಲ. ಈ ಹಿಂದೆ ವಿಧಾನಸಭೆಯ ಅಧ್ಯಕ್ಷರಾಗಿದ್ದರು. ಸದ್ಯಕ್ಕೆ ಅವರು ನೀಡಿರುವ ಅಭಿಪ್ರಾಯ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ.ಕೆ.ಬಿ.ಕೋಳಿವಾಡರ ಹೇಳಿಕೆ ಹಿಂದೆ ಅನ್ಯರ ಪ್ರಭಾವ ಇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೋರಿ ಬಿಜೆಪಿಯವರು ಪ್ರತಿಭಟನೆ ನಡೆಸುವುದು ಹೊಸತೇನಲ್ಲ. ಆರಂಭದಿಂದಲೂ ಇದನ್ನೇ ಮಾಡುತ್ತಿದ್ದಾರೆ. ಈಗ ವೇಗ ಹೆಚ್ಚಿಸಿರಬಹುದು. ಎಕ್ಸಲೇಟರ್ ಹೆಚ್ಚು ಒತ್ತಿದ್ದಾರೆ ಎನ್ನಿಸುತ್ತದೆ. ವಿರೋಧಪಕ್ಷಗಳಾಗಿ ಹೋರಾಟ ಮಾಡುವುದು ಅವರ ಧರ್ಮ ಎಂದು ಹೇಳಿದರು.
ಸಿಬಿಐ ತನಿಖೆಗೆ ನೀಡಲಾಗಿದ್ದ ಮುಕ್ತ ಅವಕಾಶವನ್ನು ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿ ಪೊಲೀಸ್ ಕಾಯಿದೆಯ ಅಡಿಯಲ್ಲಿ ಸಿಬಿಐ ಅಧಿಕಾರಿಗಳು ನೇರವಾಗಿ ತನಿಖೆ ಮಾಡಲು ಅವಕಾಶವಿದೆ. ಆದರೆ ಅನೇಕ ಸಂದರ್ಭದಲ್ಲಿ ರಾಜ್ಯಸರ್ಕಾರಗಳು ತನಿಖೆಗೆ ಅವಕಾಶ ಮಾಡಿಕೊಟ್ಟಿವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಪೂರ್ವಾನುಮತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ನಮ ರಾಜ್ಯದಲ್ಲಿ ನಾಲ್ಕೈದು ಬಾರಿ ನೇರವಾಗಿ ಸಿಬಿಐ ತನಿಖೆ ನಡೆಯುವಂತಿಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಹಿಂದಿನ ಸರ್ಕಾರ ನೇರ ತನಿಖೆಗೆ ಅವಕಾಶ ಮಾಡಿಕೊಟ್ಟಿತ್ತು. ನಮ ಸರ್ಕಾರ ಅದನ್ನು ಹಿಂಪಡೆದಿದೆ. ಇದು ಹೊಸದೂ ಅಲ್ಲ, ಆಶ್ಚರ್ಯ ಪಡುವಂತೆಯೂ ಇಲ್ಲ ಎಂದರು.
ಅನೇಕ ಪ್ರಕರಣಗಳಲ್ಲಿ ರಾಜ್ಯಸರ್ಕಾರದ ಗಮನಕ್ಕೆ ತರದೇ ನೇರವಾಗಿ ತನಿಖೆ ಮಾಡುವುದು ಸರಿಯಲ್ಲ ಎಂದ ಅವರು, ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡ ಸಮಯ ಹಾಗೂ ಸಂದರ್ಭ ಸರಿಯಿಲ್ಲದೇ ಇರಬಹುದು. ಆದರೆ ನಮ ನಿರ್ಣಯ ಸರಿ ಇದೆ. ಇದು ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ತೆಗೆದುಕೊಂಡ ನಿರ್ಣಯವಲ್ಲ ಎಂದು ಹೇಳಿದರು.
ರಾಜಭವನದಿಂದ ಮಾಹಿತಿ ಸೋರಿಕೆಯಾಗುತ್ತಿದ್ದರೆ ಅದಕ್ಕೆ ರಾಜಭವನವೇ ಹೊಣೆಗಾರಿಕೆ. ಆ ಆವರಣದೊಳಗೆ ಯಾರಿಗೂ ಹೋಗಲು ಸಾಧ್ಯವಾಗುವುದಿಲ್ಲ. ಅತ್ಯುತ್ಕೃಷ್ಟವಾದ ಭದ್ರತಾ ವಲಯ ಎಂದು ಪರಿಗಣಿಸಿದ್ದೇವೆ. ರಾಜಭವನದಿಂದ ಅನೇಕ ಪತ್ರಗಳು ಬರುತ್ತಿವೆ. ಇದನ್ನು ತನಿಖೆ ಮಾಡಿ ಎಂದು ಪತ್ರ ಬರೆದರೆ ತನಿಖೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟರೆ ಪೊಲೀಸರು ತೆರಳಿ ರಾಜಭವನದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಯಾರಿಂದ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಪತ್ತೆ ಹಚ್ಚುತ್ತಾರೆ ಎಂದು ಹೇಳಿದರು.