ತೆಲುಗು, ಕನ್ನಡ ಸೇರಿ ಸೂಪರ್ ಹಿಟ್ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿರುವ ಜನಪದ ಗಾಯಕಿ ಮಂಗ್ಲಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತ್ರಿಪುರಾದ ರೆಸಾರ್ಟ್ವೊಂದರಲ್ಲಿ ತನ್ನ ಬರ್ತ್ಡೇ ಪಾರ್ಟಿಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಬುಧವಾರ ತಡರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಪೂರ್ವಾನುಮತಿ ಇಲ್ಲದೇ ಪಾರ್ಟಿ ನಡೆಸಲಾಗಿದೆ ಎಂಬ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪರಿಣಾಮವಾಗಿ, ಮಂಗ್ಲಿ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ
ನನ್ನ ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ನಾನು ಬರ್ತ್ಡೇ ಪಾರ್ಟಿ ಆಯೋಜಿಸಿದ್ದೆ. ಇದು ನನ್ನ ಪೋಷಕರ ಇಚ್ಛೆಯಂತೆ ನಡೆಯಿತು. ಈ ಪಾರ್ಟಿಯಲ್ಲಿ ನನ್ನ ಕುಟುಂಬದ ಎಲ್ಲ ಸದಸ್ಯರು, ಸಂಬಂಧಿಕರು, ಸ್ನೇಹಿತರೂ ಹಾಜರಿದ್ರು. ಡ್ರಿಂಗ್ಸ್ ಮತ್ತು ಸಾಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದ್ರೆ ಇವುಗಳಿಗೆ ಅನುಮತಿ ಅಗತ್ಯವಿದೆ ಅನ್ನೋದು ನನಗೆ ಗೊತ್ತಿರಲಿಲ್ಲ. ರೆಸಾರ್ಟ್ನಲ್ಲಿ ಹಠಾತ್ತನೆ ಪಾರ್ಟಿ ಮಾಡಲಾಗಿತ್ತು. ಯಾರಾದ್ರೂ ನನಗೆ ಮಾಹಿತಿ ಕೊಟ್ಟಿದ್ದರೆ ಖಂಡಿತವಾಗಿ ಬೇಕಾದ ಅನುಮತಿ ಪಡೆದುಕೊಳ್ಳುತ್ತಿದೆ. ಯಾರೊಬ್ಬರೂ ಅನುಮತಿ ಅಗತ್ಯ ಅಂತ ನನಗೆ ಹೇಳಲಿಲ್ಲ. ನಾನು ತಿಳಿದೂ ತಿಳಿದೂ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ರೆಸಾರ್ಟ್ನಲ್ಲಿ ಸ್ಥಳೀಯ ಮದ್ಯ (ಲೋಕಲ್ ಡ್ರಿಂಕ್ಸ್) ಮಾತ್ರ ಇತ್ತು. ಬೇರೆ ಯಾವುದೇ ಮಾದಕ ವಸ್ತುಗಳು ಬಳಸಿರಲಿಲ್ಲ ಅಥವಾ ಕಂಡುಬಂದಿಲ್ಲ. ಪೊಲೀಸರು ಶೋಧ ನಡೆಸಿದಾಗಲೂ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ. ಗಾಂಜಾ ಸೇವಿಸಿದ್ದ ವ್ಯಕ್ತಿ ಬೇರೆಡೆ ಮತ್ತು ಬೇರೆ ಸಮಯದಲ್ಲಿ ಸೇವಿಸಿದ್ದಾನೆ ಅನ್ನೋದನ್ನ ಪೊಲೀಸರೇ ಖಚಿತಪಡಿಸಿದ್ದಾರೆ. ನಾವು ಅಧಿಕಾರಿಗಳಿಗೆ ಸಂಪೂರ್ಣ ಸಕರಿಸುತ್ತಿದ್ದೇವೆ. ತಿಳಿದೂ ತಿಳಿದೂ ಅಂತಹ ಕೆಲಸ ಮಾಡ್ತೀನಾ? ನನ್ನ ಹೆತ್ತವರ ಮುಂದೆ ಆ ರೀತಿ ನಡೆದುಕೊಳ್ಳಲು ಇಚ್ಛಿಸುತ್ತೀನಾ? ದಯವಿಟ್ಟು ಸಾಕ್ಷ್ಯಗಳಿಲ್ಲದೇ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೆಡಿಕಲ್ ಟೆಸ್ಟ್ನಲ್ಲಿ ಹಲವರು ಮಾದಕ ವಸ್ತು ಸೇವಿಸಿರೋದು ಪತ್ತೆಯಾಗಿತ್ತು. ಈ ಸಂಬಂಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾಳಿ ವೇಳೆ ಪೊಲೀಸರು ವಿಡಿಯೋ ಮಾಡಿದ್ದು, ಮಂಗ್ಲಿ, ವಿಡಿಯೋ ಮಾಡೋದು ನಿಲ್ಲಿಸ್ತಿಯೋ ಇಲ್ವೋ ಎಂದು ಪೊಲೀಸರ ಮೇಲೆ ಗದರಿದ್ದರು. ಇದಕ್ಕೆ, ನನ್ನ ಕೆಲಸ ನಾನು ಮಾಡ್ತಿದ್ದೇನೆ ಎಂದು ಪೊಲೀಸ್ ಸಿಬ್ಬಂದಿ ಉತ್ತರಿಸಿದ್ದರು.