ಭಕ್ತರ ವೇಷದಲ್ಲಿ ಮಠಕ್ಕೆ ಬಂದು ₹40 ಲಕ್ಷ ಮೌಲ್ಯದ ನಗನಾಣ್ಯ ಲೂಟಿ

ಲಿಂಗಸುಗೂರು (ರಾಯಚೂರು ಜಿಲ್ಲೆ): ಇಲ್ಲಿಯ ಇಳಕಲ್ಲ ವಿಜಯ ಮಹಾಂತೇಶ್ವರ ಮಠಕ್ಕೆ ಭಕ್ತರ ವೇಷದಲ್ಲಿ ಬಂದಿದ್ದ ಅಪರಿಚಿತರಿಬ್ಬರು ₹40 ಲಕ್ಷ ಮೌಲ್ಯದ ನಗನಾಣ್ಯ ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಗುರುವಾರ ಮಧ್ಯರಾತ್ರಿ ಮಠಕ್ಕೆ ಬಂದಿದ್ದ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಪಿಸ್ತೂಲ್ ಹಿಡಿದು ಜೀವ ಬೆದರಿಕೆ ಹಾಕುವ ಮೂಲಕ ಕಪಾಟು ಹಾಗೂ ಟ್ರಂಕ್ ಗಳಲ್ಲಿದ್ದ 7 ತೊಲ ಚಿನ್ನ, 10 ಕೆ.ಜಿ ಬೆಳ್ಳಿ, ಅಂದಾಜು ₹20 ಲಕ್ಷ ನಗದು ದೋಚಿಕೊಂಡು ಹೋಗಿದ್ದಾರೆ.

ಪಾದ ಮತ್ತು ಇಷ್ಟಲಿಂಗ ಪೂಜೆಗೆ ಬಳಸುವ ಬೆಳ್ಳಿ ಸಾಮಗ್ರಿಗಳು, ಚಿನ್ನದ ಕರಡಿಗೆ ಮತ್ತು ಸುತ್ತುಂಗುರಗಳನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ ಎಂದು ಶಾಖಾ ಮಠದ ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಇನ್ಸ್ಸ್ಪೆಕ್ಟರ್ ಪುಂಡಲಿಕ್ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶಬಾಬು , ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *