ಗುಬ್ಬಿ : ಪ್ರತಿ ಬಾರಿಯೂ ಕೂಡ ಒಲಂಪಿಕ್ ನಡೆದಾಗ ಭಾರತಕ್ಕೆ ಯಾಕೆ ಪದಕ ಬರಲಿಲ್ಲ ಎಂದು ಆಲೋಚನೆ ಮಾಡುವ ನಾವು ಕ್ರೀಡೆಗೆ ಎಷ್ಟು ಮಹತ್ವ ನೀಡುತ್ತಿದ್ದೇವೆ ಎಂದು ಎಂದಾದರು ಯೋಚನೆ ಮಾಡಿದ್ದೇವೆಯೇ..? ಕ್ರೀಡೆಯ ಬಗ್ಗೆ ಆಸಕ್ತಿ ಇರುವ ಕ್ರೀಡಾಪಟುಗಳನ್ನು ಬೆಳೆಸುವಂತಹ ಕೆಲಸ ಮಾಡಿದ್ದೇವೆಯೇ..? ಕನಿಷ್ಠ ಪಕ್ಷ ಕ್ರೀಡಾಂಗಣಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದೇವೆಯೇ..?
ಹೌದು… ಇಂತಹದೊಂದು ಪ್ರಶ್ನೆಯನ್ನು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಜನರಿಗೆ ಕೇಳಬೇಕು. ಯಾಕಂದ್ರೆ ಶಾಲಾ ಕಾಲೇಜು ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾಪಟುಗಳನ್ನು ನೀಡಿದ ಕೊಡುಗೆ ಗುಬ್ಬಿ ತಾಲೂಕಿಗೆ ಸೇರುತ್ತದೆ. ಇಂತಹ ತಾಲೂಕಿನಲ್ಲಿ ಇರುವ ಏಕೈಕ ಕ್ರೀಡಾಂಗಣ ಅವ್ಯವಸ್ಥೆಯ ಆಕರವಾಗಿ ಪ್ರಯೋಜನಕ್ಕೆ ಭಾರದ ಸ್ಥಿತಿಯನ್ನು ತಲುಪುತ್ತದೆ.
ಮುಂಜಾನೆಯಾದರೆ, ಸಂಜೆಯಾದರೆ ಹಿರಿಯ ನಾಗರಿಕರು ಇದೇ ಕ್ರೀಡಾಂಗಣದಲ್ಲಿ ವಾಕ್ ಮಾಡುತ್ತಾರೆ. ಇವರಿಗೆ ಸರಿಯಾದಂತಹ ಒಂದು ವಾಕಿಂಗ್ ಪಾತ್ ಇಲ್ಲ. ಕುಡುಕರ ಹಾವಳಿಗೆ ಇಡೀ ಕ್ರೀಡಾಂಗಣ ತತ್ತರಿಸಿ ಹೋಗಿದೆ. ವಿದ್ಯಾರ್ಜನೆಯ ಸ್ಥಳ ಕುಡುಕರ ತಡವಾಗಿ ಪುಂಡ ಬೋಕರಿಗಳ ಹಾವಳಿಗೆ ತುತ್ತಾಗುತ್ತಿರುವುದು ವಿಪರ್ಯಾಸ.
ಸರ್ಕಾರಿ ಜೂನಿಯರ್ ಕಾಲೇಜು ಆಟದ ಮೈದಾನಕ್ಕೆ ಕಾಂಪೌಂಡ್ ನಿರ್ಮಾಣ ಮಾಡಬೇಕು. ಹಳ್ಳ ದಿನ್ನೆ ಉಂಟಾಗಿರುವ ಕ್ರೀಡಾಂಗಣವನ್ನು ಸಮತಟ್ಟು ಮಾಡಬೇಕು. ವಾಕ್ ಮಾಡುವ ಹಿರಿಯರು, ಕಿರಿಯರು ಮಹಿಳೆಯರಿಗೆ ಸೌಕರ್ಯ ಒದಗಿಸಿಕೊಡಬೇಕು. ಪ್ಲಾಸ್ಟಿಕ್ ಮಯವಾಗಿರುವ ಆಟದ ಮೈದಾನ ಸ್ವಚ್ಛವಾಗಿ ಇಡುವಂತೆ ಮಾಡಬೇಕು.
ಈ ಒಂದು ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮಗಳು. ರಾಜಕೀಯ ಸಮಾವೇಶಗಳು. ಹೋಬಳಿ, ತಾಲೂಕು, ಜಿಲ್ಲಾಮಟ್ಟದ ಕ್ರೀಡೆಗಳು ನಡೆಯುತ್ತವೆ. ಕಾರ್ಯಕ್ರಮಕ್ಕೆ ಮಾತ್ರ ಬಂದು ಹೋಗುವ ಜನಪ್ರತಿನಿಧಿಗಳು, ಅಧಿಕಾರಿಗಳ ಕಣ್ಣಿಗೆ ಈ ಕ್ರೀಡಾಂಗಣ ಕಾಣುತ್ತಿಲ್ಲವೇ..? ಪ್ರತಿನಿತ್ಯ ಅಭ್ಯಾಸ ಮಾಡುವ ಕ್ರೀಡಾಪಟುಗಳ ಸಮಸ್ಯೆ ಗಮನಕ್ಕೆ ಬರುತ್ತಿಲ್ಲವೇ ಎನ್ನುವುದು ಪ್ರಶ್ನೆ.
ಈಗಲಾದರೂ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಗುಬ್ಬಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಅವ್ಯವಸ್ಥೆಗೆ ಇತಿಶ್ರೀ ಹಾಡಿ ಸುವ್ಯವಸ್ಥಿತವಾಗಿ ಮಾಡಿಕೊಡಬೇಕು ಎನ್ನುವುದು ಗುಬ್ಬಿ ನಾಗರಿಕರು ಮತ್ತು ಕ್ರೀಡಾಪಟುಗಳ ಆಗ್ರಹ.