‘ಮೋಹಿನಿಯಾಟ್ಟಂ’ ಪ್ರವೀಣೆ ಈ ಜಪಾನ್‌ ಮಹಿಳೆ; ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ಪ್ರದರ್ಶನ

ಕೇರಳ: ಮೂಲತಃ ಜಪಾನ್‌ ದೇಶದ ರಾಜಧಾನಿ ಟೋಕಿಯೋದವರಾದ ಹಿರೋಮಿ ಮಾರುಹಶಿ ಎಂಬ ಮಹಿಳೆ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪೈಕಿ ಒಂದಾದ ‘ಮೋಹಿನಿಯಾಟ್ಟಂ’ನಲ್ಲಿ ಪರಿಣಿತರಾಗಿ ಜನಪ್ರಿಯರಾಗಿದ್ದಾರೆ. ‘ಮೋಹಿನಿಯಾಟ್ಟಂ’ ದಕ್ಷಿಣ ಭಾರತದ ದೇವರ ನಾಡು ಖ್ಯಾತಿಯ ಕೇರಳದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ನೃತ್ಯವನ್ನು ಸಾಂಪ್ರದಾಯಿಕವಾಗಿ ಮಹಿಳೆಯರು ಏಕಾಂಗಿಯಾಗಿ ಪ್ರದರ್ಶಿಸುತ್ತಾರೆ. ಇದಕ್ಕೆ ಕಠಿಣ ತರಬೇತಿಯ ಅಗತ್ಯವಿದೆ.

ಹಿರೋಮಿ ಮಾರುಹಶಿ ಅವರ ಕಲಾ ಪಯಣ 1998ರಲ್ಲಿ ಪ್ರಾರಂಭವಾಗಿತ್ತು. ಸ್ಥಳೀಯ ಕಲಾ ಪ್ರಕಾರಗಳನ್ನು ಅನ್ವೇಷಿಸುವ ಉದ್ದೇಶ ಮತ್ತು ಅವುಗಳನ್ನು ಕರಗತ ಮಾಡಿಕೊಳ್ಳುವ ಬಯಕೆಯೊಂದಿಗೆ ಇವರು ಭಾರತಕ್ಕೆ ಬಂದಿದ್ದರು. ಇಂಟರ್ನೆಟ್ ಸೇರಿದಂತೆ ಇತರೆ ಸಂವಹನ ವ್ಯವಸ್ಥೆಗಳ​ ಕೊರತೆಯಿಂದಾಗಿ ಭಾರತ ಮತ್ತು ಕೇರಳದ ಬಗ್ಗೆ ಅರಿಯುವುದು, ಕಲಿಯುವುದು ಸವಾಲಾಗಿತ್ತು. ಇದಕ್ಕಾಗಿ ಪುಸ್ತಕಗಳನ್ನು ಅವಲಂಬಿಸಿದರು. ಹಲವು ಅಡೆತಡೆಗಳ ಹೊರತಾಗಿಯೂ ತಮ್ಮ ಜ್ಞಾನದ ಅನ್ವೇಷಣೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಕಠಿಣ ಪರಿಶ್ರಮದ ಫಲವಾಗಿ ಇಂದು ಹಿರೋಮಿ ಅವರಿಗೆ ಮೋಹಿನಿಯಾಟ್ಟಂ ಕರತಲಾಮಲಕವಾಗಿದೆ.

ವಿಶ್ವದೆಲ್ಲೆಡೆ ಸಾವಿರಕ್ಕೂ ಹೆಚ್ಚು ಪ್ರದರ್ಶನ: ಕೇರಳದ ಗೌರವಾನ್ವಿತ ‘ನಂಗಿಯಾರ್ ಕುತು’ ಕಲಾವಿದೆಯಾದ ಮಾರ್ಗಿ ಸತಿ ಅವರು ಹಿರೋಮಿ ಮಾರುಹಶಿ ಕಲಿಕೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದರಂತೆ. ನಂಗ್ಯಾರ್ ಕೂತು ನಂತರ ಹಿರೋಮಿ ಕಲರಿಪಯಟ್ಟು ಮತ್ತು ಭರತನಾಟ್ಯಂ ನೃತ್ಯಗಳನ್ನು ಅಧ್ಯಯನ ಮಾಡಿದರು. ನರ್ತಕಿ, ಶಿಕ್ಷಕಿ ಕಲಾಮಂಡಲಂ ಲೀಲಮ್ಮನವರ ಮಾರ್ಗದರ್ಶನದಲ್ಲಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಹಿರೋಮಿ ಭಾರತ ಮತ್ತು ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

ಮಲಯಾಳಂ ಮಾತನಾಡಲು, ಬರೆಯಲು ಕಲಿತಿದ್ದೇನೆ- ಹಿರೋಮಿ: ‘ಈಟಿವಿ ಭಾರತ್‌’ ಜೊತೆ ಮಾತನಾಡಿದ ಹಿರೋಮಿ, “ನನಗೆ ನನ್ನ ತಾಯ್ನಾಡು ಜಪಾನ್‌ನಂತೆಯೇ ಕೇರಳವೂ ಇಷ್ಟ. ಕೇರಳಿಗರು ನನ್ನ ಹೃದಯ ಗೆದ್ದಿದ್ದಾರೆ. ನಾನು ಮಲಯಾಳಂ ಮಾತನಾಡಲು ಮತ್ತು ಬರೆಯಲು ಕಲಿತಿದ್ದೇನೆ. ಕೇರಳಕ್ಕೆ ಆಗಮಿಸಿದ್ದಾಗ ಇಲ್ಲಿನ ಸ್ಥಳೀಯರೊಂದಿಗೆ ನನ್ನ ಮೊದಲ ಮಾತು ಸನ್ನೆಗಳ ಮೂಲಕವೇ ನಡೆಯಿತು. ನಂತರ, ಮಲಯಾಳಂ ಕಲಿಯಲು ಪ್ರಾರಂಭಿಸಿದೆ. ಟೋಕಿಯೊದಲ್ಲಿ ನನ್ನ ಮನೆ ಪಕ್ಕದ ನಿವಾಸಿ ಸ್ನೇಹಿತೆ ರೇಖಾ ನನಗೆ ಸಹಾಯ ಮಾಡಿದ್ದು, ಅವರಿಗೆ ವಿಶೇಷ ಧನ್ಯವಾದಗಳು. ರೇಖಾ ಪ್ರತಿದಿನ ಮಲಯಾಳಂ ಕಲಿಯಲು ನೆರವಾದರು. ಈಗ ಒಂದು ಮಟ್ಟಕ್ಕೆ ಮಲಯಾಳಂನಲ್ಲಿ ಸಂವಹನ ನಡೆಸಬಲ್ಲೆ” ಎಂದು ತಿಳಿಸಿದರು.

ಹಿರೋಮಿ ಮಾರುಹಶಿ ಅವರ ಈ ಪ್ರಯಾಣ ಕೇವಲ ಕಲಾತ್ಮಕ ಮಹತ್ವಾಕಾಂಕ್ಷೆಯದ್ದಲ್ಲ. ಪರಸ್ಪರ ಎರಡು ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವೂ ಆಗಿದೆ ಎಂದರೆ ತಪ್ಪಾಗಲ್ಲ. ವೈವಿಧ್ಯಮಯ ಸಂಸ್ಕೃತಿಯೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಅತ್ಯುತ್ತಮ ಪ್ರದರ್ಶಕರಾಗಿಯೂ ಭಾರತದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಒಟ್ಟಿನಲ್ಲಿ, ಕಲೆಗೆ ಭೌಗೋಳಿಕ ಗಡಿಯ ಮಿತಿಯಿಲ್ಲ ಎಂಬುದನ್ನೂ ಸಾಧಿಸಿ ತೋರಿಸಿದಾಕೆ ಹಿರೋಮಿ.

Leave a Reply

Your email address will not be published. Required fields are marked *