ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಕೆರೆಬಂಡಿ ಪಾಳ್ಯದ ಗ್ರಾಮದ ಹಾಲಿನ ಡೈರಿ ಸಮೀಪ ಎಂಎಸ್ಐಎಲ್ ವತಿಯಿಂದ ಮದ್ಯದ ಮಾರಾಟ ಮಳಿಗೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಅಬಕಾರಿ ಇಲಾಖೆ ಅನುಮತಿ ನೀಡಬಾರದು ಎಂದು ಕೆರೆಬಂಡಿಪಾಳ್ಯದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಒಂದೇ ದಿನ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಹೊನ್ನವಳ್ಳಿ ಪೊàಲೀಸ್ ಠಾಣೆಗೆ ಹಾಗೂ ಅಬಕಾರಿ ಇಲಾಖಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ನಂಜಪ್ಪ, ಈ ಗ್ರಾಮದಲ್ಲಿ 70ಕ್ಕೂ ಹೆಚ್ಚು ಮನೆಗಳಿದ್ದು ಕಡು ಬಡವರು, ಕೂಲಿ ಕಾರ್ಮಿಕರೇ ಜೀವನ ಸಾಗಿಸುತ್ತಿದ್ದಾರೆ. ನಿವೃತ್ತ ಶಿಕ್ಷಕಿ ಜಯಲಕ್ಷಮ್ಮ ಚಿದಾನಂದಯ್ಯ ಎಂಬುವರು ಎಂ.ಎಸ್.ಐ.ಎಲ್ ವತಿಯಿಂದ ಮದ್ಯದ ಮಾರಾಟ ಮಳಿಗೆ ಪ್ರಾರಂಭಿಸಲು ಅನುಮತಿ ಪಡೆಯಲು ಹೊರಟಿದ್ದಾರೆ. ಇದರಿಂದ ಗ್ರಾಮದಲ್ಲಿ ಮದ್ಯಪಾನಮಾಡುವವರ ಸಂಖ್ಯೆ ಹೆಚ್ಚಾಗಲಿದೆ, ಸಂಸಾರಗಳು ಬೀದಿಗೆ ಬೀಳಲಿವೆ, ಮಧ್ಯದ ಮಾರಾಟ ಮಳಿಗೆ ಮಾಡುವ ಅಕ್ಕ ಪಕ್ಕದಲ್ಲಿ, 40 ಮೀಟರ್ನಲ್ಲಿ ಹಾಲು ಉತ್ಪಾದಕರ ಸಂಘ, 50 ಮೀಟರ್ ದೂರದಲ್ಲಿ ವಾಸಿಸುವ ಮನೆಗಳು ಹಾಗೂ ಶಾಲೆ, ದೇವಾಲಯಗಳು ಇದ್ದು, ಈ ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಎಂಎಸ್ಐಎಲ್ ಮಧ್ಯ ಮಾರಾಟ ಮಳಿಗೆ ನಮ್ಮ ಗ್ರಾಮದಲ್ಲಿ ಪ್ರಾರಂಭಿಸಲು ಬಿಡಬಾರದು, ಒಂದು ವೇಳೆ ಸರ್ಕಾರ ಮಧ್ಯ ಮಾರಾಟ ಮಳಿಗೆ ಪ್ರಾರಂಭಿಸಲು ಹೊರಟರೆ, ಸರ್ಕಾರ ಹಾಗೂ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ, ಮಧ್ಯ ಮಾರಾಟ ಮಳಿಗೆ ಪ್ರಾರಂಭಿಸಿದರೆ, ಜೀವ ಬಲಿದಾನ ನೀಡಲು ಕೂಡ ಸಿದ್ದ ಎಂದರು.
ಎಸ್ಡಿಎಮ್ಸಿ ಅಧ್ಯಕ್ಷ ಅಂಬುಜ ಮಾತನಾಡಿ, ಶಾಲೆಯ ಮಕ್ಕಳು ಓಡಾಡುವ ಜಾಗದಲ್ಲಿ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸಿದರೆ, ಸಾಕಷ್ಟು ತೊಂದರೆ ಆಗಲಿದೆ. ಈ ಕೂಡಲೇ ಜಿಲ್ಲಾಡಳಿತ ಮದ್ಯ ಮಾರಾಟ ಮಳಿಗೆಯನ್ನು ಪ್ರಾರಂಭಿಸಲು ಹೊರಟಿರುವುದನ್ನು ನಿಲ್ಲಿಸಬೇಕು ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಟೇಶ್ ಮಾತನಾಡಿ, ಬೆಳಿಗ್ಗೆ ಸಂಜೆ ಗ್ರಾಮದ ಹಾಲು ಉತ್ಪಾದಕರು ಹಾಲನ್ನು ಹಾಕಲು, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬರುತ್ತಾರೆ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ಮದ್ಯದ ಮಳಿಗೆ ಪ್ರಾರಂಭಿಸುವುದು ನಮ್ಮೆಲ್ಲರ ವಿರೋಧವಿದೆ ಎಂದರು.
ಸ್ತ್ರೀಶಕ್ತಿ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯೆ ರೂಪಾ ಮಾತನಾಡಿ, ಕೆರೆ ಬಂಡಿಪಾಳ್ಯದ ಮುಖ್ಯರಸ್ತೆ ಹಾಗೂ ಬಸ್ ನಿಲ್ದಾಣ ಸಮೀಪ ಮದ್ಯದ ಮಾರಾಟ ಮಳಿಗೆಯನ್ನು ಪ್ರಾರಂಭಿಸಿದರೆ ಗ್ರಾಮಸ್ಥರಿಗೆ ಹಾಗೂ ಮಹಿಳೆಯರಿಗೆ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತದೆ, ಈ ಹಿಂದೆ ನಮ್ಮೂರಿನ ಸಾಕಷ್ಟು ಕುಡಿತ ಚಟ ಇದ್ದವರಿಗೆ ಧರ್ಮಸ್ಥಳ ಸಂಘದ ಮಧ್ಯ ವ್ಯರ್ಜನ ಶಿಬಿರದ ಮೂಲಕ ಕುಡಿತವನ್ನು ಬಿಡಿಸಲಾಗಿದೆ ಆದರೆ ಈಗ ಮತ್ತೆ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸಿದರೆ ಗ್ರಾಮದಲ್ಲಿ ಸಂಸಾರಗಳು ಬೀದಿಗೆ ಬೀಳಲಿವೆ ಎಂದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ಹೊನ್ನವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಕೆ ದೊಡ್ಡೇಗೌಡ್ರು ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ಎಂಎಸ್ಐಎಲ್ ಮಳಿಗೆ ಪ್ರಾರಂಭಿಸಲು ಅನುಮತಿಯನ್ನು ನೀಡಿಲ್ಲ ಯಾವುದೇ ಕಾರಣಕ್ಕೂ ಎಂಎಸ್ಐಎಲ್ ಮಳಿಗೆ ಪ್ರಾರಂಭಿಸಲು ಅನುಮತಿ ನೀಡುವುದಿಲ್ಲ ಎಂದರು. ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಮಾತನಾಡಿ ನಮ್ಮೂರಿನ ಪಕ್ಕದಲ್ಲಿ ಆನಿವಾಳ ರಟ್ಟೇನಹಳ್ಳಿ ಬಳುವನೆರಲು ಗ್ರಾಮವಿದ್ದು ಎಂಎಸ್ಎಲ್ ಮಳಿಗೆ ಪ್ರಾರಂಭಿಸಲು ಅಬಕಾರಿ ಇಲಾಖೆ ಅನುಮತಿ ನೀಡಿದರೆ ಉಗ್ರ ಹೋರಾಟ ಹಾಗೂ ರಸ್ತೆ ತಡೆ ಪ್ರತಿಭಟನೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕೆರೆಬಂಡಿಪಾಳ್ಯದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.