ತಿರುಪತಿ ಲಡ್ಡು ವಿವಾದ || ಪವನ್ ಕಲ್ಯಾಣ್ – ಪ್ರಕಾಶ್ ರಾಜ್ ಜಟಾಪಟಿ

ತಿರುಪತಿ ಲಡ್ಡು ವಿವಾದ || ಪವನ್ ಕಲ್ಯಾಣ್ - ಪ್ರಕಾಶ್ ರಾಜ್ ಜಟಾಪಟಿ

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡಿದ್ದಾರೆ. ಲಡ್ಡು ಕುರಿತ ಕೆಲವರ ಹೇಳಿಕೆಗೆ ಇವರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮೂಲತಃ ಕನ್ನಡದವರಾದ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ, “ಪ್ರೀತಿಯ ಪವನ್ ಕಲ್ಯಾಣ್ ಅವರೇ, ನಿಮ್ಮ ಪ್ರೆಸ್ಮೀಟ್ ನೋಡಿದೆ. ನೀವು ನನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದು ನನ್ನಲ್ಲಿ ಅಚ್ಚರಿ ಮೂಡಿಸಿತು. ನಾನು ಸದ್ಯ ವಿದೇಶದಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದೇನೆ. ಮರಳಿ ಬಂದು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಏತನ್ಮಧ್ಯೆ, ನೀವು ಸಾಧ್ಯವಾದರೆ ನನ್ನ ಹಿಂದಿನ ಟ್ವೀಟ್ಗಳನ್ನು ಓದಿ ಅರ್ಥೈಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರು ತಮ್ಮ ಹೇಳಿಕೆ ನೀಡುವ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿದ್ದರು. ಜಾತ್ಯತೀತತೆಯ ಸುತ್ತಲಿನ ಚರ್ಚೆಗಳು ಎಲ್ಲಾ ಸಮುದಾಯಗಳ ಭಾವನೆಗಳನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದ್ದರು. ಭಕ್ತರ ನೋವನ್ನು ಕ್ಷುಲ್ಲಕಗೊಳಿಸಬಾರದು ಎಂದು ಒತ್ತಿ ಹೇಳಿದ ಡಿಸಿಎಂ ಧಾರ್ಮಿಕ ವಿಚಾರಗಳಲ್ಲಿ ಗೌರವ ಇಡುವಂತೆ, ಅರ್ಥ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಜನಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸನಾತನ ಧರ್ಮದ ರಕ್ಷಣೆ ವಿಚಾರಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ತಮ್ಮ ಧಾರ್ಮಿಕ ನಂಬಿಕೆಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸೆಪ್ಟೆಂಬರ್ 20ರಂದು ನಟ ಪವನ್ ಕಲ್ಯಾಣ್ ಅವರ ಟ್ವೀಟ್ ಒಂದಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದರು. ”ಆತ್ಮೀಯ ಪವನ್ ಕಲ್ಯಾಣ್, ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿ ಈ ಘಟನೆ ಸಂಭವಿಸಿದೆ. ದಯವಿಟ್ಟು ತನಿಖೆ ನಡೆಸಿ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಿ. ನೀವೇಕೆ ಆತಂಕ ಹರಡುತ್ತಿದ್ದೀರಿ? ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಸ್ಫೋಟಿಸುತ್ತಿದ್ದೀರಿ. (ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು) ಎಂದು ನಟ ಪ್ರಕಾಶ್ ರಾಜ್ ಬರೆದುಕೊಂಡಿದ್ದರು.

Leave a Reply

Your email address will not be published. Required fields are marked *