ತಿರುಪತಿ ಪ್ರಸಾದ ಲಡ್ಡು ವಿವಾದ-ತುಮಕೂರಿನಲ್ಲಿಯೂ ಶುರುವಾಯ್ತು ಆಕ್ರೋಶದ ಬುಗ್ಗೆ

ತಿರುಪತಿ ಲಡ್ಡು ಪ್ರಕರಣ : ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ

ತುಮಕೂರು:- ಸುಪ್ರಸಿದ್ದ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆ ಬೆರೆಸುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವ ಮೂಲಕ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತುಮಕೂರು ಜಿಲ್ಲೆಯಲ್ಲಿಯೂ ಒತ್ತಾಯ ಕೇಳಿಬಂದಿದೆ.

ಈ ಕುರಿತು ಕರ್ನಾಟಕ ದೇವಸ್ಥಾನಗಳ ಮಹಾಸಂಘದಿಂದ‌ ಆಗ್ರಹ ಕೇಳಿಬಂದಿದ್ದು, ಕುಣಿಗಲ್ ತಹಶಿಲ್ದಾರ್  ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. 

ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧ: ದೇವಸ್ಥಾನಗಳ ರಕ್ಷಣೆಗಾಗಿ ಕಟಿಬದ್ಧವಾಗಿರುವ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ವತಿಯಿಂದ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆ ಬೆರೆಸುವವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಒತ್ತಾಯ ಮಾಡಲಾಗಿದೆ.

ಮನವಿಯಲ್ಲಿ ಆಂಧ್ರಪ್ರದೇಶ ರಾಜ್ಯದ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನವು ಪ್ರಪಂಚದಾದ್ಯಂತ ಕೋಟಿಗಟ್ಟಲೆ ಭಕ್ತರ ಆರಾಧನೆಯ ಸ್ಥಳವಾಗಿದೆ.  ಇದನ್ನು ಭಗವಾನ್ ಶ್ರೀ ವಿಷ್ಣುವಿನ ನಿಜವಾದ ಭೂವೈಕುಂಠವೆಂದು ಪರಿಗಣಿಸಲಾಗಿದೆ.ಇಂತಹ ಪುಣ್ಯಭೂಮಿಯಲ್ಲಿ ಪ್ರಸಾದದ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆಯನ್ನು ಬಳಸಿರುವುದು ಆಘಾತಕಾರಿ ಘಟನೆ ಯಾಗಿದೆ. ಇದರಿಂದಾಗಿ ದೇಶಾದ್ಯಂತ ಹಿಂದೂ ಸಮುದಾಯದಲ್ಲಿ ತೀವ್ರ ಆಕ್ರೋಶದ ಅಲೆ ಎದ್ದಿದೆ. ಅಷ್ಟೇ ಅಲ್ಲದೆ ಪವಿತ್ರವಾದ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸುವುದು ಒಂದು ಸಾಮಾನ್ಯ ಅಪರಾಧವಲ್ಲ. ಬದಲಾಗಿ ಕೋಟಿಗಟ್ಟಲೆ ಹಿಂದುಗಳ ಧಾರ್ಮಿಕ ಶ್ರದ್ಧೆಯ ಮೇಲಾದ ದೊಡ್ಡ ಹೊಡೆತವಾಗಿದೆ. ಧಾರ್ಮಿಕ ಭಾವನೆಗಳ ಅನಾದಾರವಾಗಿದೆ.   ಇದು ಹಿಂದುಗಳಿಗೆ ಮಾಡಿದ ದ್ರೋಹ ಮತ್ತು ಹಿಂದುಗಳನ್ನ ಭ್ರಷ್ಟರನ್ನಾಗಿಸಲು ಉದ್ದೇಶಪೂರ್ವಕ ನಡೆಸಿದ ಷಡ್ಯಂತ್ರವಾಗಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ್ ರೆಡ್ಡಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು,ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಿರುಪತಿ ಬಾಲಾಜಿ ದೇವಾಲಯದ ಪವಿತ್ರ ಲಾಡು ತಯಾರಿಕೆಯ ಗುತ್ತಿಗೆಯನ್ನು ಕ್ರಿಶ್ಚಿಯನ್ ಸಂಸ್ಥೆಗೆ ನೀಡಿದ್ದರು. ಆಗಲು ಸಾಕಷ್ಟು ವಿರೋಧವಾಗಿತ್ತು. ಮತ್ತು ದೇವಸ್ಥಾನದ ಆಡಳಿತ ಅಧಿಕಾರಿಗಳನ್ನಾಗಿ ಕ್ರಿಶ್ಚಿಯನ್ನರ ನೇಮಕ ಮಾಡಲಾಗುತ್ತಿತ್ತು ಅಷ್ಟೇ ಅಲ್ಲದೆ ಮತಾಂತರ ಮಾಡಲು ಅವರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುತ್ತಿತ್ತು. ಹೀಗೆ ಅನೇಕ ಧರ್ಮ ವಿರೋಧಿ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತಿತ್ತು. ಹೀಗಾಗಿ ಜಗನ್ ಮೋಹನ್ ರೆಡ್ಡಿಯವರು ತಂದೆಯನ್ನು ಅನುಕರಿಸುವುದನ್ನು ತಳ್ಳಿ ಹಾಕುವಂತಿಲ್ಲ , ಪ್ರಸಾದದ ಲಡ್ಡು ಪ್ರಕರಣದಲ್ಲಿ ಸಂಬಂಧಿಸಿದಂತೆ ಹಾಗೂ ಈಗ ಈ ಪ್ರಸಾದ ಲಾಡು ಪ್ರಕರಣ ಮಾತ್ರವಲ್ಲದೆ, ಜಗನ್ ಮೋಹನ್ ರೆಡ್ಡಿ ಸರ್ಕಾರ ಮತ್ತು ಅವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಅವರ ಅವಧಿಯಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿಸಿ ತೆಗೆದುಕೊಂಡಂತಹ ಎಲ್ಲಾ ನಿರ್ಧಾರಗಳನ್ನ ಕುಲಂಕುಶವಾಗಿ ತನಿಖೆ ಮಾಡಬೇಕು.  ಇವು ಹಿಂದೂ ವಿರೋಧಿ ನಿರ್ಣಯವಾಗಿದ್ದಲ್ಲಿ ಅವುಗಳನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಲ್ಲಾ ದೇವಾಲಯಗಳಲ್ಲೂ ಪರಿಶೀಲನೆಯಾಗಬೇಕು:- ದೇಶಾದ್ಯಂತ ಇರುವ ಎಲ್ಲಾ ದೇವಸ್ಥಾನಗಳಲ್ಲಿ ಇಂತಹ ಭ್ರಷ್ಟಾಚಾರ ಅಥವಾ ಹಿಂದೂ ವಿರೋಧಿ ಕೃತ್ಯಗಳು ನಡೆಯುತ್ತಿಲ್ಲವಲ್ಲ ಎಂಬುದನ್ನು ಪರಿಶೀಲಿಸಲು ಇದು ಸಕಾಲವಾಗಿದೆ. ಉತ್ತರಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಕಾವಡಾ ಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ತಾವು ತಂಗುತ್ತಿದ್ದ ಹೋಟೆಲ್ ಅಥವಾ ಡಾಬಾದಲ್ಲಿ ನೀಡಲಾಗುತ್ತಿದ್ದ ಆಹಾರದ ಮೇಲೆ ಉಗುಳುವುದು, ಮೂತ್ರಶಂಕೆ ಮಾಡುವುದು ಮುಂತಾದ ವಿಕೃತಿಗಳು ಕಂಡುಬಂದಿದ್ದವು. ಇದು ಮಾತ್ರವಲ್ಲ, ಅನೇಕ ದೇವಾಲಯಗಳ ಹೊರಗೆ ದೇವರಿಗೆ ಅರ್ಪಿಸಿದ ಹೂವುಗಳು ಮತ್ತು ಹಾರಗಳಿಗೂ ಎಂಜಲು ಹಚ್ಚುತ್ತಿರುವ ಪ್ರಸಂಗಗಳು ಬೆಳಕಿಗೆ ಬಂದಿವೆ. ಪ್ರಸ್ತುತ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಾಲಯದಿಂದ ಹಿಡಿದು ಕೇರಳದ ಅನೇಕ ದೇವಾಲಯಗಳಲ್ಲಿ ಇಂತಹ ಉತ್ಪನ್ನಗಳಿಂದ’ ದೇವರ ಪ್ರಸಾದವನ್ನು ತಯಾರಿಸುತ್ತಿರುವುದು ಬಹಿರಂಗವಾಗಿದೆ. ಧರ್ಮನಿಷ್ಠ ಹಿಂದೂಗಳು ಇದನ್ನು ಎಂದಿಗೂ ಸಹಿಸುವುದಿಲ್ಲ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವಾಗ, ಅದರಲ್ಲಿ ಈ ರೀತಿ ತೊಂದರೆ ನೀಡುವುದು ಗಂಭೀರ ಅಪರಾಧವಾಗಿದೆ. ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಆಗ್ರಹಿಸಿದ್ದಾರೆ.

 ಸರ್ಕಾರದ ಮುಂದಿಟ್ಟ ಬೇಡಿಕೆಗಳು:-

1. ಈ ಮೇಲ್ಕಂಡ ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

2. ಪ್ರತಿಯೊಂದು ದೇವಸ್ಥಾನದಲ್ಲಿ ನೀಡುವ ಪ್ರಸಾದವು ಸಾತ್ವಿಕ, ಶುದ್ಧ ಮತ್ತು ಪವಿತ್ರವಾಗಿರಬೇಕು. ಅದರ ತಯಾರಿಕೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರೂ ಧರ್ಮಪರಾಯಣ ಹಿಂದೂಗಳಾಗಿರಬೇಕು.

3.. ದೇಶಾದ್ಯಂತ ಇರುವ ಎಲ್ಲಾ ದೇವಸ್ಥಾನಗಳಲ್ಲಿ ಈ ರೀತಿ ಧರ್ಮಭ್ರಷ್ಟ ಅಥವಾ ಹಿಂದೂ ಧರ್ಮ ವಿರೋಧಿ ಕೃತ್ಯಗಳು ನಡೆಯುತ್ತಿವೆಯೇ ಎಂದು ತನಿಖೆ ನಡೆಸಬೇಕು.

4. ದೇವಸ್ಥಾನಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಮೂಲಕ ಧಾರ್ಮಿಕ ಸ್ಥಳಗಳ ಸೂಕ್ತ ರಕ್ಷಣೆ ಮಾಡಬೇಕು. ಅಲ್ಲಿ ಇತರ ಧರ್ಮೀಯ ವ್ಯಕ್ತಿಗಳನ್ನು ಟ್ರಸ್ಟಿ ಅಥವಾ ಪದಾಧಿಕಾರಿಗಳಾಗಿ ನೇಮಿಸಬಾರದು.

5. ಈ ಪ್ರಸಾದ ಲಾಡು ಪ್ರಕರಣ ಮಾತ್ರವಲ್ಲ, ಜಗನ್ ಮೋಹನ್ ರೆಡ್ಡಿ ಸರಕಾರ ಮತ್ತು ಅವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ್ ರೆಡ್ಡಿಯವರ ಸರಕಾರದ ಅವಧಿಯಲ್ಲಿ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಸಂಬಂಧಿಸಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು. ಅದರಲ್ಲಿ ಹಿಂದೂ ವಿರೋಧಿ ನಿರ್ಧಾರ ಕೈಗೊಂಡಿದ್ದಲ್ಲಿ  ಅವೆಲ್ಲವೂ ಕೂಡಲೇ ರದ್ದುಪಡಿಸಬೇಕು.

  ಈ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತುರ್ತಾಗಿ ಕ್ರಮಕೈಗೊಳ್ಳಬೇಕು ಎಂಬುದು ಹಿಂದೂ ಸಮಾಜದವರಿಂದ ಸರಕಾರಕ್ಕೆ ಮನವಿಯಾಗಿದೆ. ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಸರಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಎಂದು ಒತ್ತಾಯಿಸಿದೆ.

ಮನವಿ ಸಲ್ಲಿಕೆ  ವೇಳೆ ಸರ್ವ ಶ್ರೀ  ಸುವರ್ಣ (ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಂಘ), ಗಂಗಾಧರ್ (ಅರ್ಚಕರು, ಶ್ರೀ ಅಠವೀಶ್ವರ ಸ್ವಾಮಿ ದೇವಸ್ಥಾನ), ಕುಮಾರ್ (ಅರ್ಚಕರು, ಮುಳ್ಕಟ್ಟಮ್ಮ ದೇವಸ್ಥಾನ), ದೇವರಾಜ್, ರುದ್ರೇಶ್, ಮಂಜುನಾಥ್, ಮಂಜೇಶ್, ಚೇತನ ಶಂಕರ್ ಮತ್ತು ಚಂದ್ರಕಲಾ (ಕಾರ್ಯಕರ್ತರು, ಹಿಂದೂ ಜನ ಜಾಗೃತಿ ಸಮಿತಿ) ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *