ಇಂದು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ

ಕಳೆದ ವರ್ಷ ಆಗಸ್ಟ್​ 23ರಂದು ಭಾರತವು ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಮತ್ತು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದ ಮೊದಲ ರಾಷ್ಟ್ರವಾಗಿದೆ. ಈ ಮಹತ್ವದ ಸಾಧನೆಯನ್ನು ಗೌರವಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 23 ಅನ್ನು “ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಘೋಷಿಸಿದರು. ಇಂದು ಮೊದಲನೇ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದ್ದು, ಬಾಹ್ಯಾಕಾಶ ಇಲಾಖೆಯು ದೇಶಾದ್ಯಂತ ಸಂಭ್ರಮಾಚರಣೆ ನಡೆಸುತ್ತಿದೆ.

ಈ ವರ್ಷದ ಘೋಷವಾಕ್ಯವೇನು?: ‘Touching Lives while Touching the Moon: India’s Space Saga’ ಎಂಬ ಘೋಷವಾಕ್ಯದಲ್ಲಿ ಈ ಬಾರಿ ಬಾಹ್ಯಾಕಾಶ ದಿನ ಆಆಚರಿಸಲಾಗುತ್ತಿದೆ. ಇದು ಬಾಹ್ಯಾಕಾಶ ದಿನದ ಸತ್ವವನ್ನು ಸುಂದರವಾಗಿ ವಿವರಿಸಲಿದೆ. ಭಾರತದ ಬಾಹ್ಯಾಕಾಶ ಅನ್ವೇಷಣೆಗಳು ಕೇವಲ ಅಸಾಧಾರಣ ವೈಜ್ಞಾನಿಕ ಸಾಧನೆಗಳಿಗೆ ಸೀಮಿತವಾಗಿರದೆ, ಭಾರತೀಯರ ದೈನಂದಿನ ಜೀವನದ ಮೇಲೂ ಧನಾತ್ಮಕ ಬದಲಾವಣೆ ಬೀರುತ್ತದೆ ಎನ್ನುವುದನ್ನು ಈ ಥೀಮ್ ವಿವರಿಸುತ್ತದೆ. ಭಾರತ ನಕ್ಷತ್ರಗಳನ್ನು ಹಿಡಿಯಲು ಆಗಸಕ್ಕೆ ಏರುವಾಗಲೂ, ತನ್ನ ಬೇರುಗಳನ್ನು ಭೂಮಿಯಲ್ಲಿ ಭದ್ರವಾಗಿಟ್ಟು, ತಾಂತ್ರಿಕ ಅಭಿವೃದ್ಧಿಗಳು ಮತ್ತು ಬಾಹ್ಯಾಕಾಶ ಅನ್ವೇಷಣೆಗಳಲ್ಲಿನ ವಿಕ್ರಮಗಳ ಮೂಲಕ ತನ್ನ ಜನರ ಜೀವನವನ್ನು ಸುಧಾರಿಸಲು ಪ್ರಯತ್ನ ನಡೆಸುತ್ತಿದೆ ಎಂದು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರು ಹೇಳಿದರು.

ಚಂದ್ರಯಾನ 3 ಯಶಸ್ವಿ: 2023 ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಅಂದಿನಿಂದ ಯೋಜನೆಯ ಯಶಸ್ಸಿಗಾಗಿ ಭಾರತ ಮಾತ್ರವಲ್ಲದೇ ಜಗತ್ತು ಹಾರೈಸಿ ಕಾತುರದಿಂದ ಕಾಯುತ್ತಿತ್ತು. ಭೂಮಿಯಿಂದ ನಭಕ್ಕೆ ಚಿಮ್ಮಿದ 41ನೇ ದಿನದ ನಂತರ ಆಗಸ್ಟ್​ 23ರ ಸಂಜೆ ಚಂದ್ರನನ್ನು ವಿಕ್ರಮ್‌ ಲ್ಯಾಂಡರ್‌ ಸ್ಪರ್ಶಿಸಿತು. ಈ ಮೂಲಕ ಭಾರತದ ಹೆಜ್ಜೆ ಗುರುತುಗಳು ಚಂದ್ರನೂರಿನಲ್ಲಿ ಮೂಡಿದವು.

ಅಂತಿಮವಾಗಿ ಕೋಟ್ಯಂತರ ಜನರ ಆಶಯ, ಪ್ರಾರ್ಥನೆ ಫಲಿಸಿತು. ನಿಗದಿತ ಸಮಯದಂತೆ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಇಳಿಯುವ ಮೂಲಕ ತನ್ನ ಪರಾಕ್ರಮ ಮರೆಯಿತು. ಚಂದ್ರನಿಗೆ ಸನಿಹವಾಗುತ್ತಿದ್ದಂತೆ ಹಾರಿಜಾಂಟರ್​ ಮಾದರಿಯಿಂದ ವರ್ಟಿಕಲ್​ ಮಾದರಿಗೆ ಲ್ಯಾಂಡರ್​ ಬಂದು ಚಂದ್ರನನ್ನು ಚುಂಬಿಸಿತು. ಭಾರತದ ಚಂದ್ರ ಚುಂಬನ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಸಂಭ್ರಮಾಚರಿಸಿದರು.

ಚಂದ್ರನ ಮೇಲೆ ಇಳಿಯುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಅಪರೂಪದ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಭಾರತಕ್ಕೂ ಮೊದಲು ಅಮೆರಿಕ, ಹಿಂದಿನ ಸೋವಿಯತ್ ಒಕ್ಕೂಟ(ರಷ್ಯಾ) ಮತ್ತು ಚೀನಾದ ಉಪಗ್ರಹಗಳು ಚಂದ್ರನ ಮೇಲೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಿ ನೌಕೆಯೊಂದನ್ನು ಇಳಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ದಾಖಲೆಯನ್ನೂ ಭಾರತ ಬರೆದಿದೆ. ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ ನಂತರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ಭಾರತವು ನಾಲ್ಕನೇ ದೇಶವಾಗಿದೆ. ಸುಮಾರು 600 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಮಿಷನ್ ಪ್ರಾರಂಭವಾಗಿತ್ತು. ಭಾರತವು ಮುಂದಿನ ಮಾನವಸಹಿತ ಚಂದ್ರಯಾನಕ್ಕೆ ಪ್ರಯತ್ನಿಸಲಿದೆ ಎಂದು ಈ ಹಿಂದೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದರು.

ಮೊದಲ ಮಿಷನ್: 2008ರ ನವೆಂಬರ್ 14ರ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಭಾರತದ ಚೊಚ್ಚಲ ಚಂದ್ರಯಾನ-1 ಅನ್ನು ಅಕ್ಟೋಬರ್ 22, 2008 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ SDSC SHAR ನಿಂದ ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಭೂಮಿಯ ಕಕ್ಷೆಯೊಳಗಿನ ಕುಶಲತೆ ಮತ್ತು ಚಂದ್ರನ ಕಡೆಗೆ ಪ್ರಯಾಣಕ್ಕಾಗಿ ಸ್ಥಾನವನ್ನು ಅನುಸರಿಸಿ, ಚಂದ್ರಯಾನ-1 ನವೆಂಬರ್ 10 ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು, ಈ ಮೈಲಿಗಲ್ಲನ್ನು ಸಾಧಿಸಿದ ಐದನೇ ದೇಶವಾಗಿ ಭಾರತವನ್ನು ಗುರುತಿಸಲ್ಪಟ್ಟಿದೆ.

ನವೆಂಬರ್ 14 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಕಲ್ಟನ್ ಕುಳಿ ಬಳಿ ಚಂದ್ರನ ಇಂಪ್ಯಾಕ್ಟ್ ಪ್ರೋಬ್ (MIP) ಚುಂಬಿಸಿದಾಗ ಭಾರತವು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಐದನೇ ದೇಶವಾಯಿತು. ಈ ಕಾರ್ಯಾಚರಣೆಯು ಎರಡು ವರ್ಷಗಳ ಕಾಲ ಇರಬೇಕಿತ್ತು. ಆದರೆ ಆರ್ಬಿಟರ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡ ನಂತರ ಅಧಿಕೃತವಾಗಿ 28 ಆಗಸ್ಟ್ 2009 ರಂದು ಮುಕ್ತಾಯವಾಯಿತು.

ಎರಡನೇ ಮಿಷನ್: ಚಂದ್ರಯಾನ-1 ಮಿಷನ್‌ನ ಯಶಸ್ಸಿನ ನಂತರ, 22 ಜುಲೈ 2019 ರಂದು, ಚಂದ್ರಯಾನ-2 ಅನ್ನು ಅಂತಿಮವಾಗಿ LVM3 ನಲ್ಲಿ ಉಡಾವಣೆ ಮಾಡಲಾಯಿತು. ಕಕ್ಷೆಯನ್ನು ಏರಿಸುವ ತಂತ್ರಗಳು ಮತ್ತು ಅಂತಿಮವಾಗಿ ಟ್ರಾನ್ಸ್-ಲೂನಾರ್ ಇಂಜೆಕ್ಷನ್ ನಂತರ ಚಂದ್ರಯಾನ-2 ಆಗಸ್ಟ್ 20 ರಂದು ಚಂದ್ರನ ಕಕ್ಷೆಯನ್ನು ತಲುಪಿತು. 6 ಸೆಪ್ಟೆಂಬರ್ 2019 ರಂದು, ಮೇಲ್ಮೈಗೆ ಇಳಿಯುವಾಗ, ಲ್ಯಾಂಡರ್ ಕ್ರ್ಯಾಶ್-ಲ್ಯಾಂಡ್ ಆದ ನಂತರ ಅದರೊಂದಿಗಿನ ಸಂಪರ್ಕವು ಕಳೆದುಹೋಯಿತು.

Leave a Reply

Your email address will not be published. Required fields are marked *