ಉಪ ಚುನಾವಣೆ ಕಣಕ್ಕೆ ನಿಖಿಲ್ ರಂಗ ಪ್ರವೇಶ

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯ ‘ಮೈತ್ರಿ’ ಟಿಕೆಟ್ಗೆ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಪಟ್ಟು ಹಿಡಿದಿರುವ ಬೆನ್ನಲ್ಲೇ ಕ್ಷೇತ್ರಕ್ಕೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಂಗ ಪ್ರವೇಶ ಮಾಡಿದ್ದಾರೆ.

ನಿಖಿಲ್ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಜೆಡಿಎಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದ್ದು ‘ನಿಖಿಲ್ ಕುಮಾರಸ್ವಾಮಿ ಅವರೇ ಮೈತ್ರಿ ಅಭ್ಯರ್ಥಿ’ ಎಂಬ ಜಪ ಶುರುವಾಗಿದೆ.

ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಇತ್ತ ಚನ್ನಪಟ್ಟಣ ಪ್ರತಿನಿಧಿಸುತ್ತಿದ್ದ ಕುಮಾರಸ್ವಾಮಿ ಅವರ ವಾರಸುದಾರ ಯಾರೆಂಬ ಪ್ರಶ್ನೆ ಎದುರಾಗಿತ್ತು. ಜೆಡಿಎಸ್ನಿಂದ ಬಂದ ಮೊದಲ ಹೆಸರು ನಿಖಿಲ್ ಆಗಿದ್ದರೆ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಹೆಸರು ಕೇಳಿ ಬರುತ್ತಲೇ ಇದೆ. ಟಿಕೆಟ್ ವಿಷಯದಲ್ಲಿ ಇದುವರೆಗೆ ಮೌನವಾಗಿದ್ದ ಎಚ್.ಡಿ.ಕುಮಾರಸ್ವಾಮಿ ಇದೀಗ ಪುತ್ರನನ್ನು ಕ್ಷೇತ್ರಕ್ಕೆ ಕಳಿಸಲು ಮುಂದಾಗಿದ್ದಾರೆ.

ಕಾವು ಹೆಚ್ಚಿಸಿದ್ದ ಸಿಪಿವೈ: ‘ನಾನೇ ಕ್ಷೇತ್ರಕ್ಕೆ ಅಭ್ಯರ್ಥಿ’ ಎಂಬ ಹೇಳಿಕೆಯೊಂದಿಗೆ ಯೋಗೇಶ್ವರ್ ಟಿಕೆಟ್ ರಾಜಕೀಯಕ್ಕೆ ತಿರುವು ಕೊಟ್ಟಿದ್ದರು. ಅದಕ್ಕೆ ಮೈತ್ರಿ ನಾಯಕರು ಸೊಪ್ಪು ಹಾಕಲಿಲ್ಲ. ಕಡೆಗೆ, ‘ಚುನಾವಣೆಯಲ್ಲಿ ಸ್ಪರ್ಧೆ ಖಚಿತ’ ಎನ್ನುತ್ತಾ ಪಕ್ಷೇತರ ಸ್ಪರ್ಧೆಗೂ ಸೈ ಎಂಬ ಸಂದೇಶ ಕೊಟ್ಟಿದ್ದರು. ಮುಡಾ ಹಗರಣದ ವಿಷಯದಲ್ಲಿ ಎರಡೂ ಪಕ್ಷಗಳ ನಾಯಕರು ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದ್ದಾಗ, ಇತ್ತ ಯೋಗೇಶ್ವರ್ ಚುನಾವಣೆ ತಯಾರಿಗಾಗಿ ಸ್ವಾಭಿಮಾನಿ ಸಮಾವೇಶಕ್ಕೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸಿಪಿವೈಗೆ ಬುಲಾವ್ ಕೊಟ್ಟಿತ್ತು. ಆದರೆ, ದೆಹಲಿ ಭೇಟಿ ಫಲಪ್ರದವಾಗಲಿಲ್ಲ. ಕೆಲ ದಿನ ತಣ್ಣಗಿದ್ದ ಅವರು ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಂಡು, ಮೈತ್ರಿ ನಾಯಕರ ಹುಬ್ಬೇರಿಸಿದ್ದರು. ರದ್ದಾಗಿದ್ದ ಸಮಾವೇಶಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನದಲ್ಲಿರುವಾಗಲೇ ಮತ್ತೆ ನಿಗದಿಯಾಗಿದ್ದ ದೆಹಲಿ ಭೇಟಿಯ ಮುಹೂರ್ತ ಮುಂದೂಡಿಕೆಯಾಗಿದೆ. ಇದರ ಬೆನ್ನಲ್ಲೇ ನಿಖಿಲ್ ರಂಗ ಪ್ರವೇಶ ಮಾಡಿರುವುದು ಟಿಕೆಟ್ ರಾಜಕೀಯಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

ಎಚ್ಡಿಕೆಗೆ ಮನಸ್ಸಿಲ್ಲ: ಕ್ಷೇತ್ರದಲ್ಲಿ ಯೋಗೇಶ್ವರ್ ಎರಡು ಸಲ ಸೋತಿರುವುದೇ ಕುಮಾರಸ್ವಾಮಿ ಅವರ ವಿರುದ್ಧ. ಸೈನಿಕನ ಸದೆಬಡಿದು ಕ್ಷೇತ್ರದಲ್ಲಿ ಪಕ್ಷವನ್ನು ನೆಲೆಗೊಳಿಸುವಲ್ಲಿ ಎಚ್ಡಿಕೆ ಯಶಸ್ವಿಯಾಗಿದ್ದರು. ಇದೀಗ, ತಮ್ಮಿಂದ ತೆರವಾಗಿರುವ ಕ್ಷೇತ್ರವನ್ನು ಹಳೆ ಎದುರಾಳಿಗೆ ಬಿಟ್ಟು ಕೊಡುವ ಮನಸ್ಸು ಅವರಿಗಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಶುರುವಾಗಿದ್ದ ಮುನಿಸು, ಪಾದಯಾತ್ರೆಯಲ್ಲಿ ಸ್ಫೋಟಗೊಂಡಿತ್ತು.

ಸಿಪಿವೈ ಟಿಕೆಟ್ ಕಸರತ್ತುಗಳನ್ನು ನೋಡಿಕೊಂಡು ಸುಮ್ಮನಿದ್ದ ಎಚ್ಡಿಕೆ ಈಗ ಮಗನನ್ನು ಕ್ಷೇತ್ರಕ್ಕೆ ಕಳಿಸುವ ಮೂಲಕ ತಿರುಗೇಟು ನೀಡಲು ಮುಂದಾಗಿದ್ದಾರೆ. ಸಿಪಿವೈ ಬೆಂಬಲಿಗರ ಎದುರು ಮಂಕಾಗಿದ್ದ ಜೆಡಿಎಸ್ನವರಿಗೆ ಹೊಸ ಭರವಸೆ ತುಂಬಿದ್ದಾರೆ.

ಟಿಕೆಟ್ಗಾಗಿ ಇದುವರೆಗೆ ಕ್ಷೇತ್ರದಲ್ಲಿ ಅನುರಣಿಸುತ್ತಿದ್ದ ಸಿಪಿವೈ ಹೆಸರಿನ ಜೊತೆಗೆ ನಿಖಿಲ್ ಹೆಸರೂ ಸೇರಿಕೊಂಡಿದೆ. ಈ ಬೆಳವಣಿಗೆ ಎರಡೂ ಪಕ್ಷಗಳ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದೆ. ಅಂತಿಮವಾಗಿ ಯಾರಿಗೆ ಟಿಕೆಟ್ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

‘ನಿಖಿಲ್ ಅವರೇ ಅಭ್ಯರ್ಥಿ’

‘ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರೇ ವಾರಸುದಾರ. ಅವರೇ ಉಪ ಚುನಾವಣೆ ಅಭ್ಯರ್ಥಿ. ಅದಕ್ಕಾಗಿಯೇ ಪಂಚಾಯಿತಿ ಮಟ್ಟದಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಲು ಗ್ರಾಮ ಪ್ರವಾಸ ಹಮ್ಮಿಕೊಂಡಿದ್ದಾರೆ. ಇನ್ಮುಂದೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಕ್ತಿ ಏನೆಂದು ತೋರಿಸುತ್ತೇವೆ’ ಎಂದು ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ತಿಳಿಸಿದರು.

Leave a Reply

Your email address will not be published. Required fields are marked *