ಬೆಂಗಳೂರು: ಮುಡಾ ಪ್ರಕರಣದ ತನಿಖೆಗೆ ಸಿಎಂ ವಿರುದ್ಧ ಪೂರ್ವಾನುಮತಿ ನೀಡಿದ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ಈ ಮಧ್ಯೆ 11 ಮಸೂದೆಗಳಿಗೆ ರಾಜ್ಯಪಾಲರು ಹೆಚ್ಚಿನ ಸ್ಪಷ್ಟೀಕರಣ ನೀಡುವಂತೆ ಕೋರಿ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ಅಷ್ಟಕ್ಕೂ ರಾಜ್ಯಪಾಲರು ವಾಪಸು ಕಳುಹಿಸಿದ ಮಸೂದೆಗಳು ಯಾವುವು? ಕೇಳಿದ ಸ್ಪಷ್ಟೀಕರಣ ಏನು ಎಂಬ ವರದಿ ಇಲ್ಲಿದೆ.
ಮೂರು ಬಿಲ್ಗಳು ಎರಡನೇ ಬಾರಿ ವಾಪಸು: ರಾಜ್ಯಪಾಲರು ಮೂರು ಬಿಲ್ಗಳನ್ನು ಎರಡನೇ ಬಾರಿ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯುವ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ಡಿ.28, 2023ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಜ.16ಕ್ಕೆ ಹೆಚ್ಚಿನ ಮಾಹಿತಿ ಕೋರಿ ಈ ಬಿಲ್ ಅನ್ನು ಹಿಂತಿರುಗಿಸಿದ್ದರು. ಈಗ ಎರಡನೇ ಬಾರಿ ಬಿನ್ ಅನ್ನು ರಾಜ್ಯಪಾಲರು ವಾಪಸು ಕಳುಹಿಸಿದ್ದಾರೆ.
ಈ ವಿಧೇಯಕದ ಕಾರ್ಯ ವ್ಯಾಪ್ತಿಗೆ ಹಲವು ಪ್ರಾಧಿಕಾರಗಳು ಬರುತ್ತವೆ. ಹೀಗಾಗಿ ಸಂಬಂಧಿತ ಪ್ರಾಧಿಕಾರಿಗಳ ಸಲಹೆ, ಅಭಿಪ್ರಾಯ ಕೇಳುವುದು ಅಗತ್ಯ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಹೇಳಿತ್ತು. ಜೊತೆಗೆ ಸಿಎಂ ಈ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಕಡತ ಸಲ್ಲಿಸಲು ಸೂಚನೆ ನೀಡಿದ್ದರು. ಆದರೆ, ಸಂಬಂಧಿತ ಪ್ರಾಧಿಕಾರಗಳು ಹಾಗೂ ಕಾನೂನು ಇಲಾಖೆಯ ಅಭಿಪ್ರಾಯಗಳು ಕ್ಯಾಬಿನೆಟ್ ನೋಟ್ನಲ್ಲಾಗಲಿ ಕಡತದಲ್ಲಾಗಲಿ ಲಭ್ಯವಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯ ಮತ್ತು ಸಂಬಂಧಿತ ಪ್ರಾಧಿಕಾರಿಗಳು ನೀಡಿರುವ ಸಲಹೆಗಳ ಮಾಹಿತಿಯನ್ನು ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2023: ಇದನ್ನು ರಾಜ್ಯಪಾಲರು ಎರಡನೇ ಬಾರಿಗೆ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ನ್ನು ಮತ್ತಷ್ಟು ತಿದ್ದುಪಡಿ ಮಾಡುವ ವಿಧೇಯಕ ಇದಾಗಿದೆ. ವಿಧಾನಮಂಡಲದಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ನೀಡಿ ಡಿ.28, 2023ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಈ ಮಸೂದೆಯನ್ನು ಅಂಕಿತ ಹಾಕದೇ ಜ.11ಕ್ಕೆ ರಾಜ್ಯಪಾಲರ ಕಚೇರಿಯಿಂದ ಮಸೂದೆಯನ್ನು ಹಿಂತಿರುಗಿಸಿದ್ದರು.
ಇದೀಗ ಮಾ.14ಕ್ಕೆ ಎರಡನೇ ಬಾರಿ ರಾಜ್ಯಪಾಲರು ಬಿಲ್ ಸಂಬಂಧ ಹೆಚ್ಚಿನ ಸ್ಪಷ್ಟೀಕರಣ ಕೋರಿ ವಾಪಸು ಕಳುಹಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ಹಾಗೂ ತಿದ್ದುಪಡಿಯನ್ನು 2011 ಹಾಗೂ 2012ರಲ್ಲಿ ಮಾಡಲಾಗಿತ್ತು. ಆದರೆ ಹೈ ಕೋರ್ಟ್ ಧಾರವಾಡ ಪೀಠ ಆ ಕಾಯ್ದೆಯನ್ನು ತಿರಸ್ಕರಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪ್ರಕರಣದ ವಿಚಾರಣೆ ಕೊನೇ ಹಂತದಲ್ಲಿದೆ. ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ತಿದ್ದುಪಡಿ ಮಸೂದೆ ತರಬಹುದೇ ಎಂದು ರಾಜ್ಯಪಾಲರು ಸ್ಪಷ್ಟೀಕರಣ ಕೇಳಿದ್ದಾರೆ.
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ, 2024: ಇದನ್ನು ರಾಜ್ಯಪಾಲರು ಎರಡನೇ ಬಾರಿ ವಾಪಸು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದು ಮಾರ್ಗದರ್ಶಿ ಮೌಲ್ಯದ 40% ಕ್ಕಿಂತ ಕಡಿಮೆಯಿಲ್ಲದ ದರವನ್ನು ಪಾವತಿಸುವ ಮೂಲಕ ಹೆಚ್ಚುವರಿ ನೆಲದ ವಿಸ್ತೀರ್ಣ ಅನುಪಾತವನ್ನು (ಎಫ್‌ಎಆರ್) ಪಡೆದುಕೊಳ್ಳಲು ಅನುವು ಮಾಡಿಕೊಡುವ ವಿಧೇಯಕವಾಗಿದೆ. ಫೆಬ್ರವರಿಯಲ್ಲಿ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷದ ಸದಸ್ಯರ ಧರಣಿಯ ನಡುವೆಯೇ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿತ್ತು. ಮಾ.3ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಮಸೂದೆಯನ್ನು ಹೆಚ್ಚುವರಿ ವಿವರಣೆ ಕೋರಿ ವಾಪಸು ಕಳುಹಿಸಿದ್ದರು. ಇದೀಗ ಮತ್ತೆ ಜು.26ಕ್ಕೆ ಸರ್ಕಾರಕ್ಕೆ ಬಿಲ್ ಹೆಚ್ಚಿನ ವಿವರಣೆ ಕೋರಿ ವಾಪಸು ಕಳುಹಿಸಿದ್ದಾರೆ.
ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2024: ಇ-ನೋಂದಣಿಯನ್ನು ಅನುಮತಿಸಲು ಮತ್ತು ಉಪ-ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಸರ್ಕಾರವು ಇ-ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024ನ್ನು ಫೆಬ್ರವರಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿತ್ತು. ಜು.8ಕ್ಕೆ ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಮಸೂದೆಯನ್ನು ಜು.26ಕ್ಕೆ ವಾಪಸು ಸರ್ಕಾರಕ್ಕೆ ಮರಳಿಸಿದ್ದಾರೆ. ಇ-ನೋಂದಣಿಯಿಂದ ವಂಚನೆ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಈ ಮಸೂದೆಯಿಂದಾಗುವ ಅನುಕೂಲಗಳ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ ಮತ್ತು ಇ-ನೋಂದಣಿಯ ಸುರಕ್ಷತೆ ಬಗ್ಗೆ ವಿವರಣೆ ಕೋರಿ ಬಿಲ್ ಅನ್ನು ವಾಪಸು ಕಳುಹಿಸಲಾಗಿದೆ.
ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, 2024: ತೆರಿಗೆ ಜಾಲವನ್ನು ವಿಸ್ತರಿಸಲು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದಾಯವನ್ನು ಗಳಿಸುವ ಸಲುವಾಗಿ, ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, 2024ನ್ನು ಮೊನ್ನೆ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಪುರಸಭೆಗಳು ಮತ್ತು ನಗರ ನಿಗಮಗಳು ಪ್ರತಿ ಕಟ್ಟಡ, ಖಾಲಿ ಭೂಮಿ ಅಥವಾ ಎರಡರ ಮೇಲೂ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅನುವು ಮಾಡಿಕೊಡುವ ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಆ.6ಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಈ ಮಸೂದೆಯನ್ನು ಆ.8ಕ್ಕೆ ಹೆಚ್ಚಿನ ವಿವರಣೆ ಕೇಳಿ ವಾಪಸು ಕಳುಹಿಸಿದ್ದಾರೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ನಿಯಮ 2014 ಪ್ರಶ್ನಿಸಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಹೀಗಾಗಿ ಮಸೂದೆ ಕಾನೂನು ಬದ್ಧವಾಗುತ್ತೋ ಎಂಬ ಬಗ್ಗೆ ಕಾನೂನು ಅಭಿಪ್ರಾಯ ಲಗತ್ತಿಸುವಂತೆ ರಾಜಭವನ ಕೋರಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024: ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024ಯನ್ನು ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ವಾಪಸು ಕಳುಹಿಸಿದ್ದಾರೆ. ಚಿತ್ರಮಂದಿರಗಳು ಮಾರಾಟ ಮಾಡುವ ಟಿಕೆಟ್ ದರದ ಮೇಲೆ ಶೇಕಡಾ 1ರಿಂದ 2ರಷ್ಟು ಸೆಸ್ ಸಂಗ್ರಹಿಸಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಈ ವಿಧೇಯಕವನ್ನು ಆ.6ಕ್ಕೆ ರಾಜ್ಯಪಾಲರಕ್ಕೆ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ಆ.16ಕ್ಕೆ ರಾಜ್ಯಪಾಲರು ಜಿಎಸ್ಟಿ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆಯೋ ಮತ್ತು ಈ ಬಿಲ್ ಸಂಬಂಧ ಭಾರತೀಯ ಪ್ರಸಾರ ಮತ್ತು ಡಿಜಿಟಲ್ ಫೌಂಡೇಷನ್ ಆಕ್ಷೇಪ ವ್ಯಕ್ತಪಡಿಸಿದ್ದು, ಹೆಚ್ಚಿನ ಸ್ಪಷ್ಟನೆ ಕೋರಿ ವಾಪಸು ಕಳುಹಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 2024: ಸಹಕಾರ ಸಂಘಗಳಿಗೆ ಮೀಸಲು ಆಧಾರಿತವಾಗಿ ಮೂವರನ್ನು ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲು ಅವಕಾಶ ಕಲ್ಪಿಸುವುದೂ ಸೇರಿದಂತೆ ಇತರೆ ಬದಲಾವಣೆಗಳನ್ನೊಳಗೊಂಡ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ-2024ವನ್ನು ಜುಲೈ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಪ್ರತಿಪಕ್ಷಗಳ ವಿರೋಧದ ಮಧ್ಯೆ ಬಿಲ್ ಅಂಗೀಕಾರಗೊಂಡಿತ್ತು. ಆ.2ಕ್ಕೆ ರಾಜ್ಯಪಸಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ಆ.17ಕ್ಕೆ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಬಿಲ್ ಅನ್ನು ವಾಪಸು ಕಳುಹಿಸಿದ್ದಾರೆ. ಹೈಕೋರ್ಟ್ ಆ.8ಕ್ಕೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ 2023ರ 128A ತಿದ್ದುಪಡಿಯನ್ನು ತಿರಸ್ಕರಿಸಿದೆ. ಪ್ರತಿಪಕ್ಷ ನಾಯಕರೂ ಈ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾನೂನು ಅಭಿಪ್ರಾಯದೊಂದಿಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2024: ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅವಕಾಶ ಕಲ್ಪಿಸುವ ಮತ್ತು ಮೀಸಲಾತಿಯನ್ನು ಒದಗಿಸುವ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2024’ಯನ್ನು ರಾಜ್ಯಪಾಲರು ಅಂಕಿತ ಹಾಕದೇ ಹೆಚ್ಚಿನ ಸ್ಪಷ್ಟನೆ ಕೇಳಿ ವಾಪಸು ಕಳುಹಿಸಿದ್ದಾರೆ. ಆ.2ಕ್ಕೆ ಈ ಬಿಲ್ ಅನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ಆ.17ಕ್ಕೆ ರಾಜ್ಯಪಾಲರು ವಿವರಣೆ ಕೇಳಿ ವಾಪಸು ಕಳುಹಿಸಿದ್ದಾರೆ. ಹೈಕೋರ್ಟ್ ಆ.8ಕ್ಕೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ 2023ರ 128A ತಿದ್ದುಪಡಿಯನ್ನು ತಿರಸ್ಕರಿಸಿದೆ. ಹೀಗಾಗಿ ಕಾನೂನು ಅಭಿಪ್ರಾಯದೊಂದಿಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ.
ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024: ಜುಲೈ ಅಧಿವೇಶನದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024ನ್ನು ಅಂಗೀಕರಿಸಿತ್ತು. ದೇವಸ್ಥಾನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಅನುವು ಮಾಡುವ ಈ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಆ.6ಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಬಿಲ್ ಅನ್ನು ಆ.17ಗೆ ವಾಪಸು ಕಳುಹಿಸಿದ್ದಾರೆ. ಈಗಾಗಲೇ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾಯ್ದೆ 2023 ಜಾರಿಯಲ್ಲಿದೆ. ಅದೇ ಉದ್ದೇಶ ಹೊಂದಿರುವ ಹೊಸ ವಿದೇಯಕದ ಅಗತ್ಯತೆ ಏನಿದೆ? ಎಂದು ವಿವರಣೆ ಕೋರಿದ್ದಾರೆ.
ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣಾ) (ತಿದ್ದುಪಡಿ) ಮಸೂದೆ 2024: ಶಾಸಕರು ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಅವರು ಅನರ್ಹರಾಗದಂತೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ–2024’ನ್ನು ಬಿಜೆಪಿ, ಜೆಡಿಎಸ್ ಸದಸ್ಯರು ಆಕ್ಷೇಪದ ಮಧ್ಯೆ ಅಂಗೀಕರಿಸಿತ್ತು. ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ ಮಾ.2ಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಆ.17ಕ್ಕೆ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ.
ನಾನು ಈಗಾಗಲೇ ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣಾ) (ತಿದ್ದುಪಡಿ) ಸುಗ್ರೀವಾಜ್ಞೆ 2024 ಸಂಬಂಧ ಜ.29ಕ್ಕೆ ಕೆಲ ಸ್ಪಷ್ಟನೆ ಕೇಳಿದ್ದು, ಈವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ. ಡಿಸಿಎಂ ಸಲಹೆಗಾರ ಹುದ್ದೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದೆ. ಇದು ಕಾನೂನು, ಸಂವಿಧಾನ ಬದ್ಧವೋ ಎಂದು ಪ್ರಶ್ನಿಸಿ ಇತರ ಸ್ಪಷ್ಟನೆಗಳೊಂದಿಗೆ ವಿವರಣೆ ಕೇಳಿದ್ದಾರೆ.