ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು

ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು

ಹುಬ್ಬಳ್ಳಿ : ಲೊಕೋ ರೈಲು ಹಳಿ ತಪ್ಪಿದ ಘಟನೆ ಹುಬ್ಬಳ್ಳಿ ನೈರುತ್ಯ ವಿಭಾಗದ ಭೀಮಾ ನದಿ ಸೇತುವೆ ಬಳಿ ನಡೆದಿದೆ. ಇನ್ನೂ ರೈಲು ಹಳಿ ತಪ್ಪಿದ ಪರಿಣಾಮ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ

ಮೈಸೂರು – ಪಂಢರಪುರ ನಡುವಿನ ರೈಲು ಸಂಖ್ಯೆ 16535ರ ಇಂದಿನ (ಸೆ.25) ಪ್ರಯಾಣವನ್ನು ವಿಜಯಪುರ ಮತ್ತು ಪಂಢರಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಹಾಗೂ ವಿಜಯಪುರದಲ್ಲಿಯೇ ರೈಲು ಕೊನೆಗೊಳ್ಳಲಿದೆ.

ಪಂಢರಪುರ – ಮೈಸೂರು ನಡುವಿನ ರೈಲು ಸಂಖ್ಯೆ 16536ರ ಸೆ.26ರ ಸಂಚಾರವು ಪಂಢರಪುರ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಬಳಿಕ ನಿಗದಿತ ಸಮಯದಲ್ಲಿ ವಿಜಯಪುರದಿಂದ ಮತ್ತೆ ನಿಧಾನವಾಗಿ ಆರಂಭವಾಗಲಿದೆ.

ರೈಲು ಹಳಿ ತಪ್ಪಿರುವ ಸ್ಥಳಕ್ಕೆ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ಮತ್ತು ಇತರ ಹಿರಿಯ ಅಧಿಕಾರಿಗಳು ಧಾವಿಸುತ್ತಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಜಯಪುರದಿಂದ ಕಲಬುರಗಿಗೆ 17319 ರೈಲಿನ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಳಿ ಮರು ಜೋಡಣೆ ಕಾರ್ಯಗಳ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಧಾನ ಕಛೇರಿಯಿಂದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆಗಳಿದ್ದರೆ ಸೂಚನೆ ನೀಡಲಾಗುವುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *