ತುಮಕೂರು  || ಕಳಪೆ ಔಷಧ, ರಸಗೊಬ್ಬರ ಮಾರಾಟಗಾರ

ತುಮಕೂರು || ಕಳಪೆ ಔಷಧ, ರಸಗೊಬ್ಬರ ಮಾರಾಟಗಾರ

ತುಮಕೂರು :  ಕಳೆದ 5 ವರ್ಷಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಉತ್ಪಾದನೆ, ಸರಬರಾಜು ಹಾಗೂ ಮಾರಾಟ ನಿಯಂತ್ರಣಕ್ಕೆ ಕೃಷಿ ಇಲಾಖೆ ಜಾರಿ ದಳ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ 53 ಪ್ರಕರಣಗಳನ್ನು ದಾಖಲಿಸಿ, 94.74 ಲಕ್ಷ ರೂ. ಮೌಲ್ಯದ ಕೃಷಿ ಪರಿಕರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 38 ಪ್ರಕರಣಗಳಲ್ಲಿ ನ್ಯಾಯಾಲಯ ತೀರ್ಪು ಹೊರ ಬಂದಿದ್ದು, ಮಾರಾಟಗಾರರಿದೆ 9.09 ಲಕ್ಷ ರೂ. ದಂಡವನ್ನು ವಿಧಿಸಿದೆ ಎಂದು ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ಕಾಯ್ದೆಗಳ ಉಲ್ಲಂಘನೆ ಸಂಬಂಧ 16 ರಸಗೊಬ್ಬರ ಮತ್ತು 3 ಪೀಡೆನಾಶಕ ಪರವಾನಗಿಗಳನ್ನು ಅಮಾನತ್ತುಪಡಿಸಲಾಗಿದೆ. ಹಾಗೂ 1 ಬಿತ್ತನೆ ಬೀಜ, 20 ರಸಗೊಬ್ಬರ ಮತ್ತು 4 ಪೀಡೆನಾಶಕ ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

59.78 ಲಕ್ಷ ರೂ. ಮೌಲ್ಯದ ಕೃಷಿಗೆ ಬಳಸುವ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಅನ್ಯ ರಾಜ್ಯಗಳಿಗೆ ಕೈಗಾರಿಕಾ ಉದ್ದೇಶಕ್ಕೆ ಸಾಗಾಣಿಕೆ ಮಾಡುತ್ತಿದ್ದ (4 ಲಾರಿ) 1190.25 ಕ್ವಿಂಟಾಲ್ ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆದು ಪೋಲೀಸ್ ಠಾಣೆಗಳಲ್ಲಿ ತಪ್ಪಿಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಪ್ರಕರಣಗಳು ತನಿಖೆ ಹಂತದಲ್ಲಿವೆ ಎಂದು ತಿಳಿಸಿರುವ ಅವರು,  ಜಪ್ತಿ ಮಾಡಿದ ಯೂರಿಯಾ ರಸಗೊಬ್ಬರವನ್ನು ವಿ.ಎಸ್.ಎಸ್.ಎನ್ ಸೊಸೈಟಿಗಳ ಮೂಲಕ ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. 12 ಕಳಪೆ ಬಿತ್ತನೆ ಬೀಜ, 26 ಕಳಪೆ ರಸಗೊಬ್ಬರ ಮತ್ತು 17 ಕಳಪೆ ಕೀಟನಾಶಕ ಮಾದರಿಗಳ ಮೇಲೆ ಮೊಕದ್ದಮೆ ಹೂಡಿದ್ದು, ಅವುಗಳ ಪೈಕಿ 24 ಪ್ರಕರಣಗಳಲ್ಲಿ ಕೋರ್ಟ್ ತೀರ್ಪು ಬಂದಿದೆ. ಒಟ್ಟಾರೆ 3.35 ಲಕ್ಷ ರೂ.ಗಳ ದಂಡವನ್ನು ಮಾರಾಟಗಾರರಿಗೆ ವಿಧಿಸಲಾಗಿದೆ.  ಜೈವಿಕ ಉತ್ಪನ್ನಗಳಲ್ಲಿ ಕೀಟನಾಶಕಗಳ ಅಂಶ ಕಂಡು ಬಂದಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ನಂತರ 6 ಪ್ರಕರಣಗಳಿಗೆ ಕೋರ್ಟ್ ತೀರ್ಪು ಹೊರ ಬಂದಿದ್ದು, ತಪ್ಪಿತಸ್ಥ ಮಾರಾಟಗಾರರಿಗೆ 1.55 ಲಕ್ಷ ದಂಡ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *