ತುಮಕೂರು:- ಡಾ. ಬಿ.ಆರ್. ಅಂಬೇಡ್ಕರ್ ಕರ್ನಾಟಕದ ನಿಪ್ಪಾಣಿಯಲ್ಲಿ ಭಾಷಣ ಮಾಡಿ ಏ.10ಕ್ಕೆ 100 ವರ್ಷವಾಗುವ ಹಿನ್ನೆಲೆ ಬಿಜೆಪಿಯಿಂದ ಭೀಮಾ ಹೆಜ್ಜೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ರಥಯಾತ್ರೆಯು ಏ.11ರಂದು ಬೆಂಗಳೂರಿನ ನೆಲಮಂಗಲದಿಂದ ಆರಂಭವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶುಕ್ರವಾರ ಬೆಳಿಗ್ಗೆ 10ಗಂಟೆಗೆ ನೆಲಮಂಗಲದ ಬಳಿ ಭೀಮಹೆಜ್ಜೆ ಯಾತ್ರೆಗೆ ಚಾಲನೆ ನೀಡಲಾಗುವುದು. ನಂತರ ಬಹಿರಂಗ ಸಭೆ ಮಾಡಿ ಯಾತ್ರೆ ಆರಂಭಗೊಳ್ಳಲಿದ್ದು, ನಂತರ ತುಮಕೂರಿಗೆ ಆಗಮಿಸಲಿದೆ. ತುಮಕೂರಿನಲ್ಲಿ ಸ್ವಾಗತ ಮಾಡಿದ ಬಳಿಕ ಅಲ್ಲಿಂದ ಶಿರಾಗೆ ತೆರಳುವುದು. ಶಿರಾದ ಕಳ್ಳಂಬೆಳ್ಳ ಟೋಲ್ ಬಳಿ ಸ್ವಾಗತ ಮಾಡಿ ಬಹಿರಂಗ ಸಭೆ ನಡೆಸಲಾಗುವುದು. ನಂತರ ಶಿರಾದಲ್ಲಿ ಬಹಿರಂಗ ಸಭೆ ಮಾಡಿ ಅಲ್ಲಿಂದ ಹಿರಿಯೂರು ಮೂಲಕ ನಿಪ್ಪಾಣಿಗೆ ತೆರಳಲಿದೆ ಎಂದರು.
ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಡಾ.ಅಂಬೇಡ್ಕರ್‌ಗೆ ಆದ ಅಪಮಾನ, ಅನ್ಯಾಯ ಹಾಗೂ ಬಿಜೆಪಿ ನೀಡಿದ ಸನ್ಮಾನದ ಬಗ್ಗೆ ರಥಯಾತ್ರೆಯುದ್ದಕ್ಕೂ ತಿಳಿಸಿ, ಜಾಗೃತಿ ಮೂಡಿಸಲಾಗುವುದು. ರಥಯಾತ್ರೆಗೆ ಅಲ್ಲಲ್ಲಿ ದ್ವಿಚಕ್ರ ವಾಹನಗಳ ರ್ಯಾಲಿ ಮೂಲಕ ಸ್ವಾಗತ ದೊರೆಯಲಿದೆ. ನೂರು ವರ್ಷಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಮಾವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣದ ಅವಶ್ಯಕತೆ ಪ್ರತಿಪಾದಿಸಿ, ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳಿಗೆ ಆದ್ಯತೆ ನೀಡಲು ತಿಳಿಸಿದ್ದರು. ದೇಶ, ರಾಜ್ಯದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ಆದರೆ, ದಲಿತ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡುವ ಬದಲು ಅನ್ಯಾಯ ಮಾಡಿದೆ. ಇದನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಭೀಮ ಹೆಜ್ಜೆ ಯಾತ್ರೆಯಲ್ಲಿ ಮಾಡುತ್ತೇವೆ ಎಂದರು.
ಎಸ್ ಇಪಿ, ಟಿಎಸ್ ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ದುರುಪಯೋಗ ಮಾಡಿಕೊಂಡು ದಲಿತ ಸಮುದಾಯಕ್ಕೆ ಮೋಸ ಮಾಡಿದೆ. ಇದರ ವಿರುದ್ಧ ಈಗಾಗಲೇ ಬಿಜೆಪಿ ಹೋರಾಟ ಮಾಡುತ್ತಿದೆ. ಅನ್ಯಾಯ ಮಾಡಿರುವ ವಿಚಾರವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದರು.
ಬಿಜೆಪಿ ಮುಖಂಡ ಅನಿಲ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಇದನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು.
ಮಧುಗಿರಿ ಜಿಲ್ಲೆಯ ಸಂಘಟನಾ ಅಧ್ಯಕ್ಷ ಹನುಮಂತೇಗೌಡ ಸೇರಿದಂತೆ ಇತರೆ ಬಿಜೆಪಿ ಮುಖಂಡರು ಇದ್ದರು.