ತುಮಕೂರು: ಕ್ಯಾಂಟರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್ನಲ್ಲಿ ನಡೆದಿದೆ.

ಮೃತರೆಲ್ಲರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದವರಾಗಿದ್ದಾರೆ. ಸೀಬೆಗೌಡ, ಶೋಭಾ, ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು. ಮಗನನ್ನು ಹಾಸ್ಟೆಲ್ಗೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೃತ ಸೀಬೆಗೌಡ ಅವರಿಗೆ ಮೂವರು ಮಕ್ಕಳು. ವರ್ಣಶ್ರೀ, ದುಂಬಿಶ್ರೀ, ಭಾನುಕಿರಣ್ ಗೌಡ.


ಮೃತ ಸಿಬೇಗೌಡ ಅವರ ಮಗ ಭಾನುಕಿರಣ್ ಗೌಡ ಕುಣಿಗಲ್ ಹೊರವಲಯದ ಬಿದನಗೆರೆ ಬಳಿಯಿರುವ ವ್ಯಾಲಿ ಸ್ಕೂಲ್ನಲ್ಲಿ 8ನೇ ತರಗತಿ ಓದುತ್ತಿದ್ದ. ಭಾನುವಾರ ರಜೆ ಹಿನ್ನೆಲೆ ಮನೆಗೆ ಮಗ ಬಂದಿದ್ದ. ನಿನ್ನೆ ಊಟ ಮುಗಿಸಿ ಮಗನನ್ನು ಶಾಲೆಯ ಹಾಸ್ಟೆಲ್ಗೆ ಬಿಟ್ಟು ಬರಲು ಮಗ ಭಾನುಕಿರಣ್ನೊಂದಿಗೆ ಸಿಬೇಗೌಡ, ಅವರ ಪತ್ನಿ ಶೋಭಾ, 2ನೇ ಮಗಳು ದುಂಬಿಶ್ರೀ ಹೊರಟಿದ್ದರು.


ಮೃತ ಸಿಬೇಗೌಡರು ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ, ಕುಣಿಗಲ್ ಬೈಪಾಸ್ ಬಳಿ ಯುಟರ್ನ್ ತೆಗೆದುಕೊಳ್ಳಲು ಒನ್ ವೇಯಲ್ಲಿ ವೇಗವಾಗಿ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.