ತುಮಕೂರು || ಮಹಾತ್ಮ ಗಾಂಧಿ ಸ್ಮಾರಕ ಭವನದಲ್ಲಿ ಸ್ವಚ್ಛತೆ ಮರೀಚಿಕೆ : ಗಾಂಧಿ ಜಯಂತಿಯಂದು ಮಾತ್ರ ಗಾಂಧಿ ನೆನೆಪು

ತುಮಕೂರು || ಮಹಾತ್ಮ ಗಾಂಧಿ ಸ್ಮಾರಕ ಭವನದಲ್ಲಿ ಸ್ವಚ್ಛತೆ ಮರೀಚಿಕೆ : ಗಾಂಧಿ ಜಯಂತಿಯಂದು ಮಾತ್ರ ಗಾಂಧಿ ನೆನೆಪು

ಚನ್ನಬಸವ.ಎಂ.ಕಿಟ್ಟದಾಳ್

ತುಮಕೂರು: ನಗರದ ಮಹಾತ್ಮ ಗಾಂಧಿ ಸ್ಮಾರಕ ಭವನ ಅ. ೦2 ಗಾಂಧಿ ಜಯಂತಿಯ ಸಮಯದಲ್ಲಿ ಅಧಿಕಾರಿಗಳ ನೆನಪಿಗೆ ಬರುವಂತಹದ್ದು, ಜೂನಿಯರ್ ಕಾಲೇಜು ಮೈದಾನದಲ್ಲಿರುವ ಈ ಭವನ ಗಾಂಧಿ ಜಯಂತಿಯOದು ಮಾತ್ರ ಶೃಂಗಾರಗೊOಡು ಅಧಿಕಾರಿಗಳು ಸಾರ್ವಜನಿಕರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ.

ಗಾಂಧಿ ಜಯಂತಿಯ, ಸ್ವಾತಂತ್ರ ದಿನಾಚಾರಣೆ , ಗಣರಾಜ್ಯೋತ್ಸವ, ಕನ್ನಡರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ದಿನ ಮಾತ್ರ ಸ್ಮಾರಕದ ಬಾಗಿಲು ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಭವನಕ್ಕೆ ಬೀಗ ಹಾಕಿರುತ್ತದೆ. ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ವಿಶೇಷ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ, ಇಲ್ಲಿರುವ ಗಾಂಧಿ ಪ್ರತಿಮೆಗೆ ಹೂವಿನ ಮಾಲೆ ಹಾಕಿ ಗಾಂಧಿಯವರ ಕುರಿತು ಭಾಷಣವನ್ನು ಮಾಡಿ ಅಲ್ಲಿಗೆ ಅವರ ಕೆಲಸ ಮುಗಿಯಿತು ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ. ಭವನದ ಮುಂದೆ ನಿಂತು ಸ್ವಲ್ಪ ಹೊತ್ತು ಕಾಲ ಕಳೆದ ನಂತರ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಸ್ಮಾರಕದ ರಕ್ಷಣೆ, ನಿರ್ವಹಣೆಗೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಪ್ರತಿ ವರ್ಷವೂ ಕೇಳಿ ಬರುತ್ತಿವೆ.

ಭವನದ ಸುತ್ತಮುತ್ತ ಗಿಡಗಳು ಬೆಳೆದಿದ್ದು, ಸ್ವಚ್ಛತಾ ಕಾರ್ಯವೂ ಅ.೦೨ರ ಹಿಂದಿನ ದಿನ ಮಾತ್ರ ಆಗುತ್ತದೆ. ಇನ್ನೂ ಮಿಕ್ಕಂತಹ ದಿನಗಳಲ್ಲಿ ಗಾಧಿ ಭವನ ಸ್ವಚ್ಛತೆಯಿಲ್ಲ. ಸ್ಮಾರಕ ಭವನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿದ್ದು, ಅಭಿವೃದ್ಧಿ ದೃಷ್ಟಿಯಿಂದಲೂ ಇದು ಹಿನ್ನೆಲೆಗೆ ಸರಿದಿದೆ. ಕಾಲೇಜಿನ ಕೊಠಡಿಗಳ ಕಸ ಎಲ್ಲಾವೂ ಗಾಂಧಿ ಭವನದ ಹಿಂದೇಯೇ ಇರುತ್ತದೆ.

ಸ್ವಾತಂತ್ರ‍್ಯ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧೀಜಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು. 1927ರ ಜುಲೈ 16ರಂದು ಮತ್ತು 1934 ಜನವರಿ ೪ರಂದು ಗಾಂಧೀಜಿ ಜಿಲ್ಲೆಗೆ ಬಂದಿದ್ದರು. ಎರಡನೇ ಸಲ ಭೇಟಿ ನೀಡಿದಾಗ ಸ್ವಾತಂತ್ರ‍್ಯ ಹೋರಾಟದ ರೂಪುರೇಷೆಗಳ ಬಗ್ಗೆ ಭವನದ ಬಳಿ ಸಭೆ ನಡೆಸಿ, ವಿಶ್ರಾಂತಿ ಪಡೆದಿದ್ದರು. ಇದರ ಸವಿ ನೆನಪಿಗಾಗಿ ಉಳಿದಿರುವುದು ಸ್ಮಾರಕ ಭವನ ಮಾತ್ರ. ಐತಿಹಾಸಿಕ ಕುರುಹು ರಕ್ಷಣೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗದಿರುವುದು ಶೋಚನೀಯವಾದ ಸಂಗತಿ ಎಂದರು ತಪ್ಪಾಗಲಾರದು.

ಭವನದಲ್ಲಿ ಚಿಕ್ಕದಾದ ಮೂರು ಕೊಠಡಿ, ಸಭಾಂಗಣವಿದೆ. ಸ್ಮಾರ್ಟ್ ಸಿಟಿಯಡಿ ನಿರ್ಮಾಣವಾಗಿರುವ ಸ್ಮಾರಕ ಭವನ, ಇದಕ್ಕೆ ಸಂಬOಧ ಪಟ್ಟ ಅಧಿಕಾರಿಗಳು ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ. ಭವನದಲ್ಲಿ ಗಾಂಧೀಜಿ ಜೀವನ-ಹೋರಾಟ ಪರಿಚಯಿಸುವ ಚಿತ್ರಗಳ ಪ್ರದರ್ಶನ, ಗ್ರಂಥಾಲಯ ಆರಂಭಿಸಿದ್ದರೆ ಮುಂದಿನ ಪೀಳಿಗೆಗೆ ಇತಿಹಾಸದ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ.  ಜಿಲ್ಲಾ ಆಡಳಿತ ಮುಂದಿನ ದಿನಗಳಲ್ಲಿ ಇತ್ತ ಗಮನ ಹರಿಸಿ ಸೂಕ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

Leave a Reply

Your email address will not be published. Required fields are marked *