ತುಮಕೂರು || ಹೊಸ ದಾಖಲೆ ಬರೆಯುವತ್ತ ಕೊಬ್ಬರಿ ಬೆಲೆ; ಗಗನಕ್ಕೇರಿದ ಎಳನೀರು ದರ

ತುಮಕೂರು || ಹೊಸ ದಾಖಲೆ ಬರೆಯುವತ್ತ ಕೊಬ್ಬರಿ ಬೆಲೆ; ಗಗನಕ್ಕೇರಿದ ಎಳನೀರು ದರ

ತುಮಕೂರು: ಕೊಬ್ಬರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆಯುವ ಮುನ್ಸೂಚನೆ ಕೊಟ್ಟಿದೆ. ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ದರ ಗರಿಷ್ಠ 19,000 ರೂ. ದಾಟಿದೆ. ಕೊಬ್ಬರಿ ಬೆಲೆ ಏರಿಕೆಯಾದರೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಗುರುವಾರ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಕನಿಷ್ಠ 17,000 ರೂ. ಇದ್ದರೆ ಗರಿಷ್ಠ 19,000 ರೂ. ಆಗಿತ್ತು. ಮಾದರಿ ಬೆಲೆ 17,800 ರೂ. ಇದ್ದು ಬಹುತೇಕ ರೈತರಿಗೆ ಇದೇ ಬೆಲೆ ಸಿಕ್ಕಿದೆ.

ಸೋಮವಾರ ಕೊಬ್ಬರಿ ಬೆಲೆ ಗರಿಷ್ಠ 19,051 ರೂಪಾಯಿ ಆಗಿತ್ತು, ಗುರುವಾರ 51 ರೂಪಾಯಿ ಕಡಿಮೆಯಾಗಿದ್ದರೂ, ಉತ್ತಮ ಬೆಲೆ ಸಿಕ್ಕಿರುವುದು ತೆಂಗು ಬೆಳೆಗಾರರಿಗೆ ನೆಮ್ಮದಿ ತಂದಿದೆ. ಬರಗಾಲ, ವಿವಿಧ ರೋಗಬಾಧೆಯಿಂದಾಗಿ ತೆಂಗಿನ ಇಳುವರಿ ಕಡಿಮೆಯಾಗಿದೆ. ನಿರೀಕ್ಷಿತ ಫಸಲು ಇಲ್ಲದ ಕಾರಣ ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆಯಾಗಿದೆ.

ಹೊಸ ದಾಖಲೆ ಬರೆಯುವ ನಿರೀಕ್ಷೆ ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆಯುವ ಸಾಧ್ಯತೆ ಇದೆ. ದಶಕದ ಹಿಂದೆ 19,500 ರೂಪಾಯಿ ತಲುಪಿದ್ದ ಕೊಬ್ಬರಿ ಬಳಿಕ ಆ ಮಟ್ಟಕ್ಕೆ ಹೋಗಲೇ ಇಲ್ಲ. 2016 ರಲ್ಲಿ ಹಾಗೂ 2018ರಲ್ಲಿ 18,000 ರೂಪಾಯಿ ಗಡಿ ದಾಟಿದ್ದು ದಾಖಲೆ ಬರೆದಿತ್ತು.

ತೆಂಗಿನಕಾಯಿ, ಎಳನೀರಿನ ಬೆಲೆ ಗಗನಕ್ಕೆ ಕೊಬ್ಬರಿ ಮಾತ್ರವಲ್ಲ ತೆಂಗಿನಕಾಯಿ ಮತ್ತು ಎಳನೀರು ಬೆಲೆ ಗಗನಕ್ಕೇರಿದೆ. ಶುಕ್ರವಾರ ಅರಸೀಕೆರೆಯಲ್ಲಿ ಒಂದು ಸಾವಿರ ತೆಂಗಿನಕಾಯಿಗೆ ಕನಿಷ್ಠ 25,000 ರೂಪಾಯಿ ಇದ್ದರೆ ಗರಿಷ್ಠ 40,000 ರೂಪಾಯಿಗೆ ತಲುಪಿದೆ. ಮಾದರಿ ಧಾರಣೆ 35,000 ರೂಪಾಯಿ ಆಗಿತ್ತು. ಬೆಂಗಳೂರಿನಲ್ಲಿ ತೆಂಗಿನಕಾಯಿ ಬೆಲೆ ಕನಿಷ್ಠ 30,000 ರೂಪಾಯಿ ಇದ್ದರೆ ಗರಿಷ್ಠ 40,000 ರೂಪಾಯಿಗೆ ತಲುಪಿದೆ. ಮಾದರಿ ಧಾರಣೆ 35,000 ರೂಪಾಯಿ ಆಗಿತ್ತು. ಭದ್ರವಾತಿಯಲ್ಲಿ ಕೂಡ ತೆಂಗಿನಕಾಯಿ ಧಾರಣೆ 35,000 ರೂಪಾಯಿ ಆಗಿತ್ತು.

ಚಾಮರಾಜನಗರದಲ್ಲಿ ಸಾವಿರ ಎಳನೀರಿನ ಬೆಲೆ ಕನಿಷ್ಠ 11,000 ರೂಪಾಯಿ ಇದ್ದರೆ ಗರಿಷ್ಠ 24,000 ರೂಪಾಯಿ ಆಗಿತ್ತು. ಹುಣಸೂರು ಮಾರುಕಟ್ಟೆಯಲ್ಲಿ ಸಾವಿರ ಎಳನೀರಿನ ಬೆಲೆ ಕನಿಷ್ಠ 20,000 ರೂಪಾಯಿ ಇದ್ದರೆ ಗರಿಷ್ಠ 30,000 ರೂಪಾಯಿ ಆಗಿತ್ತು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿಲ್ಲರೆ ಮಾರಾಟಗಾರರು ಪ್ರತಿ ಎಳನೀರನ್ನು 50 ರಿಂದ 55 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *