ತುಮಕೂರು: ತಿಪಟೂರು ತಾಲೂಕು ಕಲ್ಲಯ್ಯನಪಾಳ್ಯ ಛಲವಾದಿ ಕಾಲೋನಿಯ ಗಂಗಾಧರ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಬೆಂಕಿಗೆ ಆಹುತಿಯಾಗಿದೆ. ಮನೆ ಇಲ್ಲದೇ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಕೇಂದ್ರ ಸಚಿವ ಸೋಮಣ್ಣ ಅವರು ಒಂದು ಲಕ್ಷ ಧನಸಹಾಯ ಮಾಡಿದ್ದು, ಈ ಧನಸಹಾಯದ ಜೊತೆಯಲ್ಲಿ ಪಂಚಾಯಿತಿಯಿಂದ ತಕ್ಷಣವೇ ಅವರ ಅಧಿಕಾರ ವ್ಯಾಪ್ತಿಯಲ್ಲಿ ಸ್ವಲ್ಪ ಹಣ ಹಾಗೂ ಸಾರ್ವಜನಿಕರ ಧನಸಹಾಯದಿಂದ ಶೀಟ್ ಮನೆ ನಿರ್ಮಿಸಿದ್ದಾರೆ.

ಕೇಂದ್ರ ಸಚಿವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ 5 ಲಕ್ಷಕ್ಕೆ ಅಂದಾಜು ಸಿದ್ದಪಡಿಸಿ, ಸಕ್ಷಮಾಧಿಕಾರಿಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಿಸಿದ ತಾಲ್ಲೂಕು ಆಡಳಿತಾಧಿಕಾರಿ ರವರಿಗೆ ಸೂಚನೆ ನೀಡಿದರು. ಆದರೆ ಇದುವರೆಗೂ ಜಿಲ್ಲಾಡಳಿತವು ಯಾವುದೇ ಮನೆ ಮಂಜೂರಾತಿ ನೀಡಿರುವುದಿಲ್ಲ. ಅಲ್ಲದೇ ಸರ್ಕಾರದ ವತಿಯಿಂದ ಯಾವುದೇ ಪರಿಹಾರ ನೀಡಿರುವುದಿಲ್ಲ. ನಿರಾಶ್ರಿತರಿಗೆ ಪರಿಹಾರ ನೀಡುವಂತೆ ಮುಖ್ಯ ಮಂತ್ರಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಗೃಹಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರು ಅರ್ಜಿ ಸಲ್ಲಿಸಿ, ಮನವಿ ಮಾಡಿರುತ್ತಾರೆ ಹಾಗೂ ಅರ್ಜಿದಾರರ ಮನವಿ ಮೇರೆಗೆ ಜಿಲ್ಲಾಧಿಕಾರಿ ಅವರಿಗೆ ಅಗತ್ಯ ಕ್ರಮವಹಿಸಲು ಗೃಹ ಸಚಿವರು ಟಿಪ್ಪಣಿ ನೀಡಿದ್ದರು ಸಹ ವಿಳಂಬ ಮಾಡಿರುತ್ತಾರೆ.
ಸರ್ಕಾರದ ವತಿಯಿಂದ ವಿಶೇಷ ಅನುದಾನದಡಿಯಲ್ಲಿ ಒಂದು ಮನೆ,
ಸಿಲಿಂಡರ್ ಕಂಪನಿಯಿಂದ ವಿಮಾ ಪರಿಹಾರ ಹಾಗೂ ಬೆಂಕಿಯಿಂದ ಆಗಿರುವ ನಷ್ಟಕ್ಕೆ ಸರ್ಕಾರದ ವತಿಯಿಂದ ಆರ್ಥಿಕ ಪರಿಹಾರ ನೀಡಲು ಸೂಕ್ತ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಛಲವಾದಿ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.