ತಿಪಟೂರು : ಸಾಹಿತ್ಯ- ಸಂಶೋಧನೆಯ ಮೂಲಕ ಶರಣ-ಸೂಫಿ ವಿಚಾರಧಾರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿದ ಸಂಶೋಧಕ-ಸಾಹಿತಿ ಡಾ. ಅಬ್ದುಲ್ ಹಮೀದ್ (87) ವಯೋಸಹಜವಾಗಿ ಸಾವನ್ನಪ್ಪಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿನ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಹಮೀದ್ ಬಿ.ಎ., ಬಿ.ಎಡ್, ಎಂಎ(ಕನ್ನಡ) ಪದವಿಯನ್ನು ಪಡೆದಿದ್ದು ಹಿಂದಿಯಲ್ಲಿ ವಿಶಾರದ, ಕನ್ನಡ ರತ್ನ ಪರೀಕ್ಷೆಗಳಲ್ಲಿಯೂ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದರು.
ಶರಣ -ಸೂಫಿ ಪರಂಪರೆ ಜಾನಪದ ಸಂಶೋಧನೆ, ಕೃಷಿಕ್ಷೇತ್ರ, ಭಾವೈಕ್ಯತೆಯ ಪ್ರತಿಪಾದನೆ ಹೀಗೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ “ಜಲಗಾರ” ನಾಟಕವೂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹಜ್ರತ್ ನವಾಜ್ (ಸಂಶೋಧನೆ), ಸಾಮಾಜಿಕ ಅನಿಷ್ಠಗಳು, ನೆಹರು ಮತ್ತು ಸಂಸದರು, ಸಿದ್ದಾಂತ ಶಿಖಾಮಣಿಯಲ್ಲಿ ಸಾರ್ವತ್ರಿಕ ಮೌಲ್ಯಗಳು(ಸಂಶೋಧನೆ), ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ‘ಜಂಗಮ್ ಕೀ ಓರ್’ (ಅನುವಾದ) ತಮ್ಮ ಪ್ರಮುಖ ಕೃತಿಗಳು.
ಹಮೀದ್ ಚಿಂತನಶೀಲರೂ, ವಿದ್ವಾಂಸರೂ, ಕ್ರಿಯಾಶೀಲರೂ, ಅಧ್ಯಯನಶೀಲರೂ ಆಗಿದ್ದು ಕನ್ನಡ ಸಾಹಿತ್ಯ ಪರಂಪರೆಯನ್ನು ಬೆಳೆಸುವವರ ಪೈಕಿ ಅಗ್ರಗಣ್ಯರಾಗಿದ್ದರು. 12ನೇ ಶತಮಾನದ ಶರಣರ ಸಂದೇಶಗಳನ್ನು ಜನರ ಮನೆಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ವಚನ ಸಾಹಿತ್ಯ ಮತ್ತು ಪರಂಪರೆಯ ಕುರಿತಂತೆ ಜಾಗೃತಿಯನ್ನು ಮೂಡಿಸಿದ್ದರು. ನೂರಾರು ಪ್ರಶಸ್ತಿಗಳನ್ನಯ ರಾಷ್ಟ್ರ, ರಾಜ್ಯಮಟ್ಟದಲ್ಲಿ ಪಡೆದಿದ್ದ ಅವರ ಅಕಾಲಿಕ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.
ಮೃತರು ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯನ್ನು ಹಂದನಕೆರೆ ಸ್ವಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಗೆ ಅಂತ್ಯಸಂಸ್ಕಾರ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.