ತುಮಕೂರು || ಸರ್ಕಾರಿ ಸೌಲಭ್ಯಕ್ಕಾಗಿ ಹೆಚ್ಚಿದ ನಕಲಿ ಕಾರ್ಮಿಕ ಕಾರ್ಡುಗಳು..!

ತುಮಕೂರು || ಸರ್ಕಾರಿ ಸೌಲಭ್ಯಕ್ಕಾಗಿ ಹೆಚ್ಚಿದ ನಕಲಿ ಕಾರ್ಮಿಕ ಕಾರ್ಡುಗಳು..!

ಗುಬ್ಬಿ:   ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಕಟ್ಟಡ ಕಾರ್ಮಿಕರಿಗೆ ಹಲವು ಉಪಯುಕ್ತ ಯೋಜನೆ ರೂಪಿಸಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಕ್ಕೆ 5 ಲಕ್ಷ ರೂ., ಅವರ ಇಬ್ಬರು ಮಕ್ಕಳ ಮದುವೆಗೆ 60 ಸಾವಿರ ರೂ.ಗಳು, ಕಟ್ಟಡ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವಾಗ ಸಾವಿಗೀಡಾದರೆ 75 ಸಾವಿರ ರೂ.ಗಳು ಹಾಗೂ 60 ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ 3೦೦೦ ಸಾವಿರ ರೂ.ಗಳನ್ನು ಮತ್ತು ಮಕ್ಕಳ ಉನ್ನತ ವ್ಯಾಸಂಗಕ್ಕೆ ಲ್ಯಾಪ್‌ಟಾಪ್ ವ್ಯವಸ್ಥೆ ಹೀಗೆ ಹಲವು ಅನುಕೂಲತೆಗಳನ್ನು ಸರ್ಕಾರ ಮಾಡಿಕೊಟ್ಟಿದೆ.

ಆದರೆ ಇದರ ಉಪಯೋಗಕ್ಕಿಂತ ಗುಬ್ಬಿ ತಾಲ್ಲೂಕಿನ ಕೆಲವು ಮಧ್ಯವರ್ತಿಗಳು ಮತ್ತು ಕೆಲ ಅಧಿಕಾರಿಗಳ ಶಾಮೀಲಿನಿಂದ ಕಾರ್ಮಿಕರ ಅತಿಹೆಚ್ಚು ನಕಲಿ ಕಾರ್ಡುಗಳು ಸೃಷ್ಟಿಯಾಗಿವೆ. ಅವು ಯಾವ ಹಂತ ತಲುಪಿವೆಯೆಂದರೆ, ಕಟ್ಟಡ ಕಟ್ಟುವ ಗುತ್ತಿಗೆದಾರರನ್ನು ಮತ್ತು ಕೆಲವು ಸೈಬರ್ ಕೇಂದ್ರದವರಿಗೆ ಒಂದು ಸಾವಿರ ಕೊಟ್ಟರೆ ಈ ಕಾರ್ಡ್ ದೊರಕುತ್ತದೆಯಂತೆ. ಹೀಗಾಗಿ ಗುಬ್ಬಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹನ್ನೊಂದು ಸಾವಿರ ಕಟ್ಟಡ ಕಾರ್ಮಿಕರ ಕಾರ್ಡುಗಳು ಇದ್ದವಂತೆ.

ಬಹಳ ಸುಲಭವಾಗಿ ಕಟ್ಟಡ ಕಾರ್ಮಿಕರ ಕಾರ್ಡುಗಳನ್ನು ಮಾಡಿಸಬಹುದಾಗಿದೆ. ಆಧಾರ್ ಕಾರ್ಡ್, ಫೋಟೋ ಮತ್ತು ಗುತ್ತಿಗೆದಾರನಿಂದ ಪ್ರಮಾಣ ಪತ್ರ ಹಾಗೂ ಹಾಜರಿ ಪತ್ರವನ್ನು ಯಾವುದಾದರೂ ಸೈಬರ್ ಸೆಂಟರ್‌ಗೆ ಒಂದು ಸಾವಿರ ಹಣದೊಂದಿಗೆ ಕೊಟ್ಟರೆ ಸಾಕು,  ನಿಮ್ಮ ಕಾರ್ಡು ಸಿದ್ಧವಾಗುವುದು. ಕಾರ್ಮಿಕರೆ ಅಲ್ಲದವರು ಸಾಮಾಜಿಕ ಭದ್ರತೆಗಾಗಿ, ಸರ್ಕಾರ ಕೊಡುವ ಕಿಟ್‌ಗಾಗಿ ಹಾಗೂ ಕಾರ್ಮಿಕರ ಕುಟುಂಬದ ಸದಸ್ಯರ ಮದುವೆಗೆ ಕೊಡುವ ಐವತ್ತು ಸಾವಿರ ಹಣಕ್ಕಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಸೌಲತ್ತಿಗಾಗಿ  ಕಾರ್ಡು ಪಡೆದಿದ್ದಾರೆ.

ಕಟ್ಟಡ ಕಾರ್ಮಿಕರ ಕಾರ್ಡು ಇದ್ದು ಅವರು ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡOತಹ ಹಾಜರಾತಿ ಇದ್ದು, ಅವರಿಗೆ 60ವರ್ಷ ಆಗಿದ್ದಲ್ಲಿ, ಅಂತಹ ಕಾರ್ಮಿಕರಿಗೆ ಕೆಲವು ಮಾನದಂಡಗಳನ್ನು ವಿಧಿಸಿ ಅವರು ಅರ್ಹರಾದಲ್ಲಿ ಮಾಸಿಕ 3೦೦೦ ದಷ್ಟು ಹಣ ಪಿಂಚಣಿಯ ರೂಪದಲ್ಲಿ ಸಿಗುತ್ತದೆ.

ಕಟ್ಟಡ ಕಾರ್ಮಿಕರ ಕಾರ್ಡು ಇದ್ದವರಿಗೆ ಸರ್ಕಾರ ಕಳೆದ ವರ್ಷ ಅವರಿಗೆ ಬೇಕಾದ ಸಲಕರಣೆಗಳ ಕಿಟ್ಟನ್ನು ಇಲಾಖೆ ಕೊಟ್ಟಿತ್ತು. ಇದನ್ನು ಗಮನಿಸಿದ ಕೆಲವು ಕಾರ್ಮಿಕರೆ ಅಲ್ಲದವರು ನಕಲಿ ದಾಖಲೆಗಳನ್ನು ಕೊಟ್ಟು ಕಾರ್ಡ್ ಮಾಡಿಸಿರುತ್ತಾರೆ ಎನ್ನುವುದೇ ಇಲಾಖೆಯ ಆರೋಪ. ಈ ಹಿಂದೆ ಗುಬ್ಬಿಯಲ್ಲಿ ಇದ್ದ ಲೇಬರ್ ಇನ್‌ಸ್ಪೆಕ್ಟರ್ ಗಳು ಸರಿಯಾಗಿ ಪರಿಶೀಲನೆ ಮಾಡಿಲ್ಲದ ಕಾರಣ ನಕಲಿ ಕಾರ್ಡುಗಳು ಹೆಚ್ಚಿವೆ. ಇವುಗಳಿಗೆ ಕಡಿವಾಣ ಹಾಕಲು ಈಗ ಬಂದಿರುವ ಇನ್‌ಸ್ಪೆಕ್ಟರ್ ಹಂತ ಹಂತವಾಗಿ ಪ್ರಯತ್ನಿಸುತ್ತಿದ್ದಾರಾದರೂ ಇನ್ನೂ ಪೂರ್ಣ ಪ್ರಮಾಣದ ಫಲಿತಾಂಶ ಸಿಕ್ಕಿಲ್ಲ. ನಕಲಿ ದಾಖಲೆಗಳನ್ನು ಒದಗಿಸಿ ಕಾರ್ಡುಗಳನ್ನು ಮಾಡಿಸಲು ಕೆಲವು ಗುತ್ತಿಗೆದಾರರು ಶಾಮೀಲಾಗಿ ಇಲಾಖೆಗೆ ತಲೆನೋವಾಗಿದ್ದಾರೆ. ಅಧಿಕಾರಿಗಳು ವಿಳಾಸ ಪರಿಶೀಲನೆ ಹಾಗೂ ಕರ್ತವ್ಯ ಪರಿಶೀಲನೆಗೆ ಸ್ಥಳಕ್ಕೆ ಹೋದಾಗ ಅಲ್ಲಿ ಕಾರ್ಮಿಕರೆ ಇಲ್ಲದಿರುವುದು ಇದ್ದರೂ ಅವರು ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆಯAತೆ. ಈ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ಕಾರ್ಡುಗಳನ್ನು ತಿರಸ್ಕರಿಸುತ್ತಿದ್ದಾರೆ. ಮುಂದುವರೆದ ಭಾಗವಾಗಿ ಪ್ರಭಾವಿ ರಾಜಕಾರಣಿಗಳು ಹಾಗೂ ಶಾಸಕರಿಂದಲೂ ಶಿಫಾರಸ್ಸಿಗೆ ಫೋನ್ ಕರೆಗಳು ಬರುತ್ತಿವೆಯಂತೆ.

ಗುಬ್ಬಿಗೆ ಈಗ ಬಂದಿರುವ ಕಾರ್ಮಿಕ ಇಲಾಖೆಯ ನಿರೀಕ್ಷಕ ತಿಲಕ್‌ರವರು ಸಾಕಷ್ಟು ಮಾರ್ಪಾಡು ಮಾಡಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಹಲವು ನಕಲಿ ಕಾರ್ಡಗಳನ್ನು ರದ್ದುಗೊಳಿಸಿದ್ದಾರಂತೆ. ಹೊಸದಾಗಿ ಬರುವ ಅರ್ಜಿಗಳ ವಾಸಸ್ಥಳ ಪರಿಶೀಲನೆ ಮಾಡುತ್ತಿದ್ದಾರಂತೆ. ಆದರೂ ಇಲ್ಲಿ ಕೆಲವು ಮಧ್ಯವರ್ತಿಗಳು ಬೇರು ಬಿಟ್ಟಿದ್ದು, ಅವರ ನಕಲಿ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಕಷ್ಟು ಸಮಯವೇ ಬೇಕಾಗಬಹುದು. ಜೊತೆಗೆ ಇಲ್ಲಿ ಸಿಬ್ಬಂದಿ ಕೊರತೆ ಇದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹೊರ ಗುತ್ತಿಗೆ ನೌಕರರಾದ್ದರಿಂದ ಇದು ಕಷ್ಟ ಸಾಧ್ಯವಾಗಲೂಬಹುದು. ಏನೇ ಆಗಲಿ ಬಡ ಕೂಲಿ ಕಾರ್ಮಿಕರಿಗೆ ಸರ್ಕಾರ ನೀಡುವ ಈ ಸೌಲಭ್ಯಗಳು ಈ ರೀತಿ ದಿಕ್ಕು ತಪ್ಪಿ ಸ್ಥಿತಿವಂತರ ಪಾಲಾಗಲು ಕಾರಣವಾದವರ ಮೇಲೆ ಕ್ರಮ ಕೈಗೊಂಡರೆ ಮಾತ್ರ ಸರ್ಕಾರದ ಯೋಜನೆಗಳು ನೇರವಾಗಿ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸಾಧ್ಯ.

Leave a Reply

Your email address will not be published. Required fields are marked *