ತುಮಕೂರು || ಕುಲಾಂತರಿ ತಳಿಯ ಬೆಳೆ ವಿರುದ್ಧ ರೈತರ ಸತ್ಯಾಗ್ರಹ

ತುಮಕೂರು || ಕುಲಾಂತರಿ ತಳಿಯ ಬೆಳೆ ವಿರುದ್ಧ ರೈತರ ಸತ್ಯಾಗ್ರಹ

ತುಮಕೂರು: ಕುಲಾಂತರಿ ಆಹಾರ (ಜಿಎಂಒ) ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ದೊಡ್ಡಹೊಸೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಸೆ. 29ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೆ ‘ದೊಡ್ಡಹೊಸೂರು ಸತ್ಯಾಗ್ರಹ’ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರದ ಪಾರಂಪರಿಕ ಕೃಷಿ ಜ್ಞಾನ, ಹಿರಿಮೆ, ದೃಷ್ಟಿಕೋನ, ಆಯಾಮ ವಿಸ್ತಾರವಾಗಿದ್ದು. ಇಂತಹ ದೇಶಕ್ಕೆ ಕುಲಾಂತರಿ ಆಹಾರ ತರಲು ಬಹುರಾಷ್ಟ್ರೀಯ ಕಂಪನಿಗಳು ಪಿತೂರಿ ನಡೆಸುತ್ತಿವೆ. ಕೃಷಿ, ಸಂಸ್ಕೃತಿ, ಪರಿಸರ ಮತ್ತು ಸಮಾಜ ವಿರೋಧಿ ಕೃತ್ಯ ನಡೆಸಲು ಮುಂದಾಗಿದೆ. ಇದು ಜೈವಿಕ ವ್ಯವಸ್ಥೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಕುಲಾಂತರಿ ತಳಿಯು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ. ಇದನ್ನು ನಾವು ಒಗ್ಗಟ್ಟಾಗಿ ತಡೆಯಲೇಬೇಕು. ಕುಲಾಂತರಿ ತಳಿ ಮುಕ್ತ ದೇಶ ಎಂದು ನಮ್ಮ ದೇಶವನ್ನು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಜಿಎಂ ಬೆಳೆ ವಿರೋಧಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. “ಕ್ರಿಮಿನಾಶಕಗಳ ಅತಿರೇಕದ ಬಳಕೆಗೆ ಬೇಡಿಕೆಯಿರುವ ಕಾರಣ GM ಬೆಳೆಗಳು ಕ್ಯಾನ್ಸರ್‌ಗೆ ಮೂಲ ಕಾರಣ ಎಂದು ಅನೇಕ ಸಂಶೋಧಕರು ದೃಢಪಡಿಸಿದ್ದಾರೆ. ಆದ್ದರಿಂದ, ಜಿಎಂ ಬೀಜಗಳನ್ನು ಬಳಸದಿರಲು ರೈತರು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಇದು ಇಡೀ ರಾಜ್ಯವನ್ನು ಮಾತ್ರವಲ್ಲದೆ ದೇಶವನ್ನು ಆವರಿಸಬೇಕು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟುಕೊಡಬೇಕು ಎಂದು ಅವರು ಸಲಹೆ ನೀಡಿದರು.

ಕುಲಾಂತರಿ ಬೆಳೆಗಳಿಗೆ ಅವಕಾಶ ನೀಡದಂತೆ ಸರ್ಕಾರಗಳ ಮೇಲೆ ಒತ್ತಡ ತರಲು ರೈತರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ‘ಸತ್ಯಾಗ್ರಹ’ ಆರಂಭಿಸಿದ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಮತ್ತು ಅವರ ತಂಡವನ್ನು ಶ್ಲಾಘಿಸಿದರು. ಬಯೋ ಟೆಕ್ನಾಲಜಿ ಹಾಗೂ ಕುಲಾಂತರಿ ತಳಿಗಳ ಸಂಶೋಧನೆಗೆ ಸರ್ಕಾರ ನೆರವು ನೀಡುವುದನ್ನು ನಿಲ್ಲಿಸಬೇಕು. ಕಾರ್ಪೊರೇಟ್ ಕಂಪನಿಗಳು ಇಂತಹ ಕಾರ್ಯಗಳಿಗೆ ಹಣಕಾಸಿನ ನೆರವು ನೀಡದಂತೆ ತಡೆಯೊಡ್ಡಬೇಕು. ಕುಲಾಂತರಿ ತಳಿಗಳ ಅಭಿವೃದ್ದಿ ಕುರಿತು ಶಿಕ್ಷಣ, ಸಂಶೋಧನೆ, ಹಾಗೂ ವಿಸ್ತರಣೆಗೆ ಬಹುರಾಷ್ಟ್ರೀಯ ಕಂಪನಿಗಳು ಹಣ ನೀಡುವುದನ್ನು ನಿಷೇಧಿಸಬೇಕು. ಬಿಯರ್ ಕಂಪನಿ ಹಾಗೂ ಐಸಿಎಆರ್‌ಗೆ ಆಗಿರುವ ಒಪ್ಪಂದ ತಕ್ಷಣವೇ ರದ್ದುಪಡಿಸಬೇಕು. ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಸಹಜ ಬೇಸಾಯಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಲಾಯಿತು.

Leave a Reply

Your email address will not be published. Required fields are marked *